

ಸವಣೂರ: ತಾಲೂಕಿನ ಕಡಕೋಳ ಗ್ರಾಮದಲ್ಲಿ ವಿಶ್ವ ಗುರು ಬಸವಣ್ಣನವರ ಮಂಟಪ, ಬಸವ ಭವನ ನಿರ್ವಿುಸಲು ಬಸವ ತತ್ವ ಅಭಿಮಾನಿ ಪರಮಪ್ಪ ಕೊಡೆಪ್ಪ ದೊಡ್ಡಮನಿ ಅವರು 5 ಗುಂಟೆ 1 ಅಣೆ ಜಮೀನು ದಾನವಾಗಿ ನೀಡಿದ್ದಾರೆ.
93 ವರ್ಷ ವಯಸಿನ ಪರಮಪ್ಪ ಕೊಡೆಪ್ಪ ದೊಡ್ಡಮನಿ ಅವರು ಸ್ವತ: ಗುರುವಾರ ಸವಣೂರ ಉಪ ನೋಂದಣಾಧಿಕಾರಿ ಕಚೇರಿ ಆಗಮಿಸಿ ಬಸವದಳಕ್ಕೆ ಭೂದಾನಕ್ಕೆ ಸಹಿ ನೀಡಿ ಇತರರಿಗೆ ಮಾದರಿಯಾಗಿದ್ದಾರೆ.
ಗ್ರಾಮದಲ್ಲಿ ಬಸವದಳ ವತಿಯಿಂದ ಪದಾಧಿಕಾರಿಗಳು ಶರಣರ ವಚನಗಳನ್ನು ಶರಣರ ಜೀವನ ಚರಿತ್ರೆ ಹಾಗೂ ಶರಣ ಸಾಹಿತ್ಯ ಮುಂದಿನ ಮುಂದಿನ ಜನಾಂಗಕ್ಕೆ ಅರ್ಥೈಯಿಸಲು ಹಾಗೂ ಮಾರ್ಗದರ್ಶನವಾಗಲಿ ಎಂಬ ಉದ್ದೇಶದಿಂದ ವಿಶ್ವ ಗುರು ಬಸವಣ್ಣನವರ ಮಂಟಪ, ಬಸವ ಭವನ ನಿರ್ವಣಕ್ಕೆ ಮುಂದಾಗಿದ್ದರು. ಆದರೆ, ನಿವೇಶನದ ಹಿನ್ನಲೆಯಲ್ಲಿ ನನೆಗುದಿಗೆ ಬಿದ್ದಿದ್ದ ಯೋಜನೆಗೆ ಭೂ ದಾನದಿಂದ ಮರುಜೀವ ಬಂದಾಗಿದೆ.
ಗ್ರಾಮದ ಬಸವದಳದ ಅಧ್ಯಕ್ಷ ವೀರಪ್ಪ ತಿಪ್ಪಣ್ಣ ಬ್ಯಾಡಗಿ ಮಾತನಾಡಿ, ಬಸವ ತತ್ವ, ಲಿಂಗಾಯತ ಧರ್ಮ ಜಗತ್ತಿನಾದ್ಯಂತ ಹರಡಲಿ ಎಂಬ ಅಪೇಕ್ಷೆಯಿಂದ ಗ್ರಾಮದ ಮುಖ್ಯರಸ್ತೆಯಲ್ಲಿ ನಿವೇಶನವನ್ನು ದಾನವಾಗಿ ನೀಡಿರುವದು ಸಂತಸ ತಂದಿದೆ. ಬಸವದಳ ಹೆಸರಿಗೆ ನಿವೇಶನ ನೋಂದಣಿಯಾಗಿದೆ. ಕೂಡಲೇ ಕಾಮಗಾರಿ ಕೈಗೊಳ್ಳಲು ಆರಂಭಿಸಲಾಗುವುದು ಎಂದರು.