

ಮಂಡ್ಯ: ಪ್ರತಿ ವರ್ಷ ಬಜೆಟ್‌ನಲ್ಲಿ ಗೃಹ ಕಾರ್ಮಿಕರಿಗೆ ಅನುದಾನ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗೃಹ ಕಾರ್ಮಿಕರ ವೃತ್ತಿ ಸಂಘಟನೆಯ ಕಾರ್ಯಕರ್ತೆಯರು ನಗರದ ಗುರುವಾರ ಪ್ರತಿಭಟನೆ ನಡೆಸಿದರು.
ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಧರಣಿ ನಡಸಿದ ಕಾರ್ಯಕರ್ತೆಯರು, ಬಳಿಕ ಜಿಲ್ಲಾ ಕಾರ್ಮಿಕ ಇಲಾಖೆಗೆ ತೆರಳಿ ಮನವಿ ಸಲ್ಲಿಸಿದರು. ಗೃಹ ಕಾರ್ಮಿಕರು ಆರ್ಥಿಕತೆಯ ಮೂಕ ಮತ್ತು ಅದೃಶ್ಯದ ಬೆನ್ನೆಲುಬು. ಲೈವ್ ಇನ್ ಕೆಲಸಗಾರರು ಪೂರ್ಣ ಪ್ರಮಾಣದ ಕೆಲಸಗಾರರು ಹಾಗೂ ಅರೆಕಾಲಿಕ ಕೆಲಸಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ನಮಗೆ ಸಾಮಾಜಿಕ ಭದ್ರತೆ ಮತ್ತು ಕೆಲಸದ ಸ್ಥಳದ ಪ್ರಯೋಜನಗಳನ್ನು ಒದಗಿಸುವುದಕ್ಕೆ ಸರ್ಕಾರದಿಂದ ಈವರೆಗೂ ಸಾಧ್ಯವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೃಹ ಕಾರ್ಮಿಕರು ವಿವಿಧ ರೀತಿಗಳಲ್ಲಿ ತಾರತಮ್ಯ, ಶೋಷಣೆ, ಕಿರುಕುಳವನ್ನು ಎದುರಿಸುತ್ತಿದ್ದಾರೆ. ದೂರು ದಾಖಲಿಸಲು ಯಾವುದೇ ಮಾರ್ಗಗಳಿಲ್ಲ. ಉದ್ಯೋಗ ಭದ್ರತೆಯೂ ಇಲ್ಲ. ಮಾಲೀಕರು ಅವರ ಇಚ್ಚೆಯಂತೆ ಗೃಹ ಕಾರ್ಮಿಕರನ್ನು ಏಕಾಏಕಿ ವಜಾ ಮಾಡಬಹುದು. ಹೀಗಾಗಿ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಗೃಹ ಕಾರ್ಮಿಕರಿಗೆ ಸೂಕ್ತವಾದ ಕಾನೂನುಗಳೇ ಇಲ್ಲ. ಗೃಹ ಕಾರ್ಮಿಕರಿಗೆ ಇರುವ ನಿಯಮವನ್ನು ಬೆಂಬಲಿಸಿ ರಾಜ್ಯ ವಿಧಾನ ಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಬೇಕು. ಗೃಹ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸಬೇಕು. ಕಾನೂನಿನ ಮೂಲಕ ನೋಂದಣಿ, ಡೇಟಾ ಬೇಸ್ ರಚನೆ ಆಗಬೇಕು ಎಂದು ಒತ್ತಾಯಿಸಿದರು.
ಅಂತೆಯೇ ಮುಖ್ಯವಾಗಿ ಪ್ಲೇಸ್‌ಮೆಂಟ್ ಏಜೆನ್ಸಿ ನಿಯಂತ್ರಣ ಕಾನೂನು ಜಾರಿಗೊಳಿಸಬೇಕಿದೆ. ಇದರಿಂದ ಮನೆಗೆಲಸಗಾರರಾಗಿ ಕೆಲಸ ಮಾಡಲು ಹುಡುಗಿಯರ ರಾಜ್ಯ, ಅಂತಾರಾಜ್ಯ, ಅಂತಾರಾಷ್ಟ್ರೀಯ ಕಳ್ಳಸಾಗಾಣೆಯನ್ನು ತಡೆಯಬಹುದಾಗಿದೆ. ಅಂತೆಯೇ ಗೃಹ ಕಾರ್ಮಿಕರ ವಿರುದ್ಧದ ಕಳ್ಳತನದ ಆರೋಪದ ಪ್ರಕರಣಗಳ ವಿಚಾರಣೆಗೆ ಪ್ರೋಟೋಕಾಲ್‌ಗಳನ್ನು ಸ್ಥಾಪಿಸಲು ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡಬೇಕು. ಕೆಲಸದ ಸ್ಥಳದಲ್ಲಿ ಗೃಹ ಕಾರ್ಮಿಕರಿಗೆ ಲೈಂಗಿಕ ಕಿರುಕುಳದ ಪ್ರಕರಣಗಳನ್ನು ಪರಿಹರಿಸುವಲ್ಲಿ ಸ್ಥಳೀಯ ದೂರುಗಳ ಸಮಿತಿಯನ್ನು ಸಕ್ರಿಯಗೊಳಿಸಬೇಕು ಸೇರಿದಂತೆ 9 ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷೆ ಜಯಮ್ಮ, ಜಿಲ್ಲಾಧ್ಯಕ್ಷೆ ಲಲಿತಮ್ಮ, ಪದಾಧಿಕಾರಿಗಳಾದ ನಾಗಮ್ಮ, ಆಶಾ, ಶೋಭಾ ಇತರರಿದ್ದರು.