ವರದಕ್ಷಿಣೆ ಕಿರುಕುಳಕ್ಕೆ ಗೃಹಣಿ ಬಲಿ?

31 Nela Ph 02 Protest
Published on

ನೆಲಮಂಗಲ: ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಗರಸಭೆ ವ್ಯಾಪ್ತಿಯ ಅರಿಶಿಣಕುಂಟೆ ಗ್ರಾಮದ ಆದರ್ಶ ನಗರ ನಿವಾಸಿ ನಂದಿನಿ (27) ಮೃತೆ.

ನಂದಿನಿಗೆ ರಂಗಸ್ವಾಮಿ ಎಂಬುವವರೊಂದಿಗೆ 11 ವರ್ಷಗಳ ಹಿಂದೆ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ.

ಜು.30ರಂದು ಮಧ್ಯಾಹ್ನ 3.00 ಗಂಟೆಗೆ ರಂಗಸ್ವಾಮಿ ಅಣ್ಣನಾದ ಗಂಗರಾಜು, ನಂದಿನಿ ಸಹೋದರ ಜಯಪ್ಪ ಎಂಬುವವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಮನೆಗೆ ಬಂದು ನೋಡಿದಾಗ ತಲೆ, ಬೆನ್ನು, ಕುತ್ತಿಗೆ ಭಾಗದಲ್ಲಿ ಗಾಯದ ಗುರುತುಗಳಿದ್ದವು. ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಜಯಪ್ಪ, ರಂಗಸ್ವಾಮಿ, ಗಂಗರಾಜು, ಅತ್ತೆ ಲಕ್ಷ್ಮಮ್ಮ ಸೇರಿ ವರದಕ್ಷಿಣೆಗಾಗಿ ಕೊಲೆ ಮಾಡಿದ್ದಾರೆ ಎಂದು ನಗರದ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಂದಿನಿ ಮತ್ತು ರಂಗಸ್ವಾಮಿ ನಡುವೆ ಜಗಳವಾಗಿದ್ದು, ಪಾಲಕರ ಗಮನಕ್ಕೆ ಬಂದು ನ್ಯಾಯ ಪಂಚಾಯಿತಿ ಮಾಡಿದ್ದರು. ಆದರೂ ಪತಿ ವರದಕ್ಷಿಣೆ ತಗೆದುಕೊಂಡು ಬರುವಂತೆ ಕಿರುಕುಳ ನೀಡುತ್ತಿದ್ದ. ಕಳೆದ ಜನವರಿಯಲ್ಲಿ ನಿವೇಶನವೊಂದನ್ನು ಮಾರಿ 20 ಲಕ್ಷ ರೂ. ನೀಡಲಾಗಿತ್ತು ಎಂದು ತಿಳಿಸಿದರು.

ಪ್ರತಿಭಟನೆಗೆ ಮುಂದಾದ ಮೃತಳ ಕುಟುಂಬದವರು: ನಗರ ಠಾಣೆ ಮಂಭಾಗ ನಂದಿನಿ ಕುಟುಂಬಸ್ಥರು ಶುಕ್ರವಾರ ಆರೋಪಿಗಳನ್ನು ಬಂಧಿಸುವಂತೆ ಪ್ರತಿಭಟನೆಗೆ ಮುಂದಾದರು. ನಂದಿನಿ ಸಾವು ಆತ್ಮಹತ್ಯೆಯೋ, ಕೊಲೆಯೊ ಎಂಬುದು ಮರಣೋತ್ತರ ಪರೀಕ್ಷೆ ಬಂದ ನಂತರ ತಿಳಿಯಲಿದ್ದು ವರದಿ ಆಧಾರದ ಮೇಲೆ ತನಿಖೆ ಕೈಗೊಳ್ಳುವುದಾಗಿ ವೃತ್ತ ನಿರೀಕ್ಷಕ ಶಿವಣ್ಣ ನಂದಿನಿ ಕುಟುಂಬಸ್ಥರನ್ನು ಮನವೊಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net