ಮಕ್ಕಳ ಭವಿಷ್ಯಕ್ಕೆ ಪಠ್ಯೇತರ ಚಟುವಟಿಕೆ ಸಹಕಾರಿ

21-sanshi-1
Published on

ಸಂಶಿ: ಮಕ್ಕಳ ಭವಿಷ್ಯಕ್ಕೆ ಪಠ್ಯೇತರ ಚಟುವಟಿಕೆಗಳು ಸಹಕಾರಿ. ಸಮಾಜದಲ್ಲಿ ಮುಂದೆ ಒಳ್ಳೆಯ ಸ್ಥಾನಮಾನ ದೊರೆಯಲು ಚಿಕ್ಕಂದಿನಿಂದಲೇ ದೊಡ್ಡ ಗುರಿ ಇಟ್ಟುಕೊಂಡು ಸಾಧಿಸಲು ಶ್ರಮಿಸಬೇಕು ಎಂದು ಕಲ್ಯಾಣಪುರಮಠದ ಶ್ರೀ ಬಸವಣ್ಣಜ್ಜನವರು ಹೇಳಿದರು.

ಗ್ರಾಮದ ಶ್ರೀ ಜಗದ್ಗುರು ಫಕೀರೇಶ್ವರ ಮಠದಲ್ಲಿ ರಾಜ್ಯ ಮಕ್ಕಳ ಪರಿಷತ್​ನ ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಜಾನಪದ ಡೊಳ್ಳು ತರಬೇತಿ ಶಿಬಿರದ ಸಮಾರೋಪ ಹಾಗೂ ಪ್ರದರ್ಶನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಕುಂದಗೋಳ ತಾಲೂಕಿಗೆ ಹಲವಾರು ಕ್ಷೇತ್ರಗಳಲ್ಲಿ ಮಹಾನ್ ಸಾಧಕರು ಮತ್ತು ವಿದ್ಯಾರ್ಥಿಗಳು ಕೀರ್ತಿ ತಂದು ಕೊಟ್ಟಿದ್ದಾರೆ. ವಿದ್ಯಾರ್ಥಿಗಳು ಕುಂದಗೋಳದ ಹೆಸರನ್ನು ಇನ್ನಷ್ಟು ಪಸರಿಸಬೇಕು. ಮಕ್ಕಳು ಪಠ್ಯದ ಜತೆಗೆ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕು ಎಮದರು.

ಗ್ರಾಪಂ ಅಧ್ಯಕ್ಷ ರಾಜು ಪುಟ್ಟಣ್ಣನವರ, ಸಾಧನೆ ಯಾರ ಸ್ವತ್ತೂ ಅಲ್ಲ. ಮಕ್ಕಳ ಮನಸು ಬಿಳಿ ಹಾಳಿ ಇದ್ದಂತೆ. ಅದರಲ್ಲಿ ಅಚ್ಚಳಿಯದಂತೆ ಭಾವನಾತ್ಮಕ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಬಿತ್ತಬೇಕು ಎಂದರು.

ವಿರಕ್ತಮಠದ ಶ್ರೀ ಚನ್ನಬಸವ ದೇವರು ಸಾನ್ನಿಧ್ಯ ವಹಿಸಿದ್ದರು. ಜಾನಪದ ಕಲಾವಿದ ಗೋವಿಂದಪ್ಪ ತಳವಾರ, ನೃತ್ಯ ತರಬೇತಿ ನೀಡಿದ ಸರಳಾ, ಕಥೆ-ಕವನ-ಸಂಕಲನ ಕಲಿಸಿದ ಲಲಿತಾ ಚಾಕಲಬ್ಬಿ, ರೋಪ್ ಮಲ್ಲಕಂಬ ತರಬೇತುದಾರ ಮಾರುತಿ ಮಾರೆಪ್ಪನವರ, ಮೃದಂಗ ಮತ್ತು ಸಂಗೀತ ಶಿಕ್ಷಕ ಕೃಷ್ಣ ಮೂರ್ತಿ, ಪಲ್ಲವಿ, ಡೊಳ್ಳು ಮೇಳದ ಕರಿಯಪ್ಪ ಪೂಜಾರ ಅವರನ್ನು ಸನ್ಮಾನಿಸಲಾಯಿತು.

ಕಸಾಪ ತಾಲೂಕಾಧ್ಯಕ್ಷ ಲೋಕೇಶ ಸರಾವರಿ, ನಾಗಪ್ಪ ಪೂಜಾರ, ಗ್ರಾಪಂ ಉಪಾಧ್ಯಕ್ಷೆ ಗೌರವ್ವ ಹರಕುಣಿ, ಸದಸ್ಯ ಗಿರೀಶಗೌಡ ಪಾಟೀಲ, ಹಜರೇಸಾಬ್ ಪಠಾಣ, ಇರ್ಷಾದ ಮುಲ್ಲಾ, ಶಿಬಿರದ ನಿರ್ದೇಶಕ ಶಶಿಕುಮಾರ ರೇವಣಕಿ, ಇತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net