

ಮಂಡ್ಯ: ಜಿಲ್ಲೆಯ ಯುವ ಪ್ರತಿಭೆ ಎಸ್.ಕುಶಾಲ್ ಅಭಿನಯಿಸಿರುವ ಡಾಲರ್ಸ್ ಪೇಟೆ ಸಿನಿಮಾ ಸೆ.6ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ನೈಜ ಘಟನೆ ಆಧರಿಸಿದ ಸಿನಿಮಾ ಇದಾಗಿದೆ ಎಂದು ಕಾಂಗ್ರೆಸ್ ಮುಖಂಡ ಶಿವನಂಜು ತಿಳಿಸಿದರು.
ಪುನೀತ್‌ರಾಜ್‌ಕುಮಾರ್ ಅಭಿನಯದ ಜೇಮ್ಸ್ ಸೇರಿದಂತೆ ಕೆಲ ಸಿನಿಮಾದಲ್ಲಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ನಟಿಸಿರುವ ಕುಶಾಲ್ ಮೊದಲ ಬಾರಿಗೆ ನಾಯಕ ನಟರಾಗಿ ತೆರೆ ಮೇಲೆ ಬರುತ್ತಿದ್ದಾರೆ. ಅಪ್ಪಟ ಗ್ರಾಮೀಣ ಪ್ರತಿಭೆಯಾದ ಕುಶಾಲ್ ಅವರು ಜಿಮ್ನಾಸ್ಟಿಕ್ ಪಟುವೂ ಹೌದು. ಹೀಗಾಗಿ ಸಿನಿಮಾದಲ್ಲಿ ಯಾವುದೇ ರೋಪ್ ಮತ್ತು ಡೂಪರ್‌ಗಳಿಲ್ಲದೆ ಅವರೇ ಸಾಹಸ ಮಾಡಿ ನಟಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಂಡ್ಯದ ಲೆಕ್ಕಪರಿಶೋಧಕ ಸುನೀಲ್ ಅವರ ಪುತ್ರ ಕುಶಾಲ್, ಇಂಜಿನಿಯರಿಅಗ್ ಪದವೀಧರ. ಹಲವಾರು ನಾಟಕಗಳಲ್ಲಿ ಅಭಿನಯಿಸಿರುವ ಅವರಿಗೆ ನಟನೆಯಲ್ಲಿ ಹೆಚ್ಚು ಆಸಕ್ತಿ. ಆದ್ದರಿಂದ ನಾಟಕಗಳಿಂದ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ತಮಿಳುನಾಡಿನ ಬ್ಯಾಂಕೊಂದರಲ್ಲಿ 13 ಕೋಟಿ ರೂ ಹಣ ಜನರ ಖಾತೆಗೆ ಜಮೆಯಾಗುತ್ತಿದೆ. ಅದು ಹೇಗೆ ಮತ್ತು ನಂತರ ಏನಾಯಿತು ಎಂಬುದೇ ಚಿತ್ರದ ತಿರುಳು. ಸಾಹಸಮಯ, ಕುತೂಹಲಭರಿತ, ಹೈಪರ್ ಲಿಂಕ್ ಮತ್ತು ಡಾರ್ಕ್ ಕಾಮಿಡಿ ಥ್ರಿಲ್ಲರ್ ಚಿತ್ರವಾಗಿದೆ ಎಂದು ವಿವರಿಸಿದರು.
ನಾಯಕ ನಟ ಎಸ್.ಕುಶಾಲ್ ಮಾತನಾಡಿ, ಹೊಸಬರ ಪ್ರಯತ್ನವಾಗಿ ಸಿನಿಮಾ ತೆರೆ ಮೇಲೆ ಬರುತ್ತಿದೆ. ನಿರ್ದೇಶಕ ಮೋಹನ್ ಅವರ ಪತ್ನಿ ಪೂಜಾ ನಿರ್ಮಾಪಕರಾಗಿದ್ದಾರೆ. ಸಿನಿಮಾದಲ್ಲಿ 2 ಹಾಡುಗಳಿದ್ದು, ಸಿನಿಮಾ ಉತ್ತಮವಾಗಿ ಮೂಡಿಬಂದಿದೆ ಎಂದು.
ಲೆಕ್ಕ ಪರಿಶೋಧಕ ಸುನೀಲ್, ನಾಗೇಶ್, ಆನಂದ್, ವೆಂಕಟೇಶ್, ಕೆ.ಎಲ್.ನಾಗೇಂದ್ರ ಹಾಜರಿದ್ದರು.