ಜಯಪುರದಲ್ಲಿ ಡೋಲೆರೈಟ್ ಕಲ್ಲಿನ ಉಂಗುರ ಪತ್ತೆ

10jyp1
Published on

ಜಯಪುರ: ಮೇಗುಂದ ಹೋಬಳಿ ವ್ಯಾಪ್ತಿಯ ಅಗಳಗಂಡಿ ಗ್ರಾಮದ ನವಿಲರೆ ಕಲ್ಲಿನಲ್ಲಿ ಸುಮಾರು 6000 ವರ್ಷ ಹಳೆಯದಾದ ನವಶಿಲಾಯುಗ ಕಾಲದ ಡೋಲೆರೈಟ್ ಕಲ್ಲಿನ ಉಂಗುರ ಪತ್ತೆಯಾಗಿದೆ.

ನವಶಿಲಾಯುಗ ಕಾಲದ ಅತ್ಯಂತ ಅಮೂಲ್ಯವಾದ ಡೋಲೆರೈಟ್ ಕಲ್ಲಿನ ಉಂಗುರ ನವಿಲರೆಕಲ್ಲು ಎಸ್ಟೇಟ್‌ನಲ್ಲಿ ಪತ್ತೆಯಾಗಿರುವುದು ಈ ಪ್ರದೇಶದಲ್ಲಿ ಮೊದಲು ಜನವಸತಿ ಆರಂಭವಾಗಿರುವುದಕ್ಕೆ ಜೀವಂತ ಸಾಕ್ಷಿಯಾಗಿದೆ. ಈ ಅವಧಿಯಲ್ಲಿ ನೆಲೆಗೊಂಡ ಮಾನವ ಜೀವನಶೈಲಿಯ ಆರಂಭದ ದಿನಗಳನ್ನು ಇದರಿಂದ ತಿಳಿಯಬಹುದಾಗಿದೆ.

ಜನರು ಕೇವಲ ಬೇಟೆ ಮತ್ತು ಸಂಗ್ರಹಣೆ ಮೇಲೆ ಅವಲಂಬಿತರಾಗುವುದಕ್ಕಿಂತ ಹೆಚ್ಚಾಗಿ ಸಸ್ಯಗಳನ್ನು ಬೆಳೆಸಲು ಮತ್ತು ಆಹಾರಕ್ಕಾಗಿ ಪ್ರಾಣಿಗಳನ್ನು ಸಾಕಲು ಕಲಿಯುತ್ತಾರೆ. ಇದು ಹೆಚ್ಚು ಅತ್ಯಾಧುನಿಕ ಕಲ್ಲಿನ ಉಪಕರಣಗಳ ಬಳಕೆಗೆ ಹೊಂದಿಕೆಯಾಗಿದ್ದು, ಇದು ಕೃಷಿ ಮತ್ತು ಪ್ರಾಣಿಗಳ ಹಿಂಡಿಗೆ ಉಪಯುಕ್ತವಾಗಿತ್ತು. ದಕ್ಷಿಣ ಭಾರತದಲ್ಲಿ ಈ ಅವಧಿಯು ಸರಿ ಸುಮಾರು 6000 ಬಿಸಿ (ಸಾಮಾನ್ಯ ಯುಗದ ಮೊದಲು) ಪ್ರಾರಂಭವಾಗಿ 1500 ಬಿಸಿಯವರೆಗೆ ನಡೆದಿರುವುದು ಅಧ್ಯಯನದಿಂದ ಕಂಡುಬಂದಿದೆ. ಕಬ್ಬಿಣದ ಆವಿಷ್ಕಾರಕ್ಕೂ ಮೊದಲು ತಯಾರಿಸಲಾದ ಈ ಕಲ್ಲಿನ ಉಂಗುರವನ್ನು ಅಗೆಯಲು ಮತ್ತು ಬಲೆಗಳನ್ನು ನೀರಿನಲ್ಲಿ ಮುಳುಗಿಸಲು ಒಂದು ತೂಕವಾಗಿ, ಮತ್ತು ಮಣಿಗಳಿಗೆ ಹೊಳಪು ಕೊಡಲು ಆಧಾರವಾಗಿ ಬಳಸಲಾಗುತ್ತಿತ್ತು.

ಕಲ್ಲು ಸಿಕ್ಕಿರುವ ಈ ಪ್ರದೇಶದಲ್ಲಿ ಒಂದು ಹಳ್ಳವು ಪಶ್ಚಿಮದಿಂದ ಪೂರ್ವಕ್ಕೆ ಹರಿಯುತ್ತಾ ಸೀತಾ ನದಿಯನ್ನು ಸೇರುತ್ತದೆ. ಈ ಸೀತಾ ನದಿ ನಂತರದಲ್ಲಿ ತುಂಗಾ ನದಿ ಸೇರುತ್ತದೆ ಎಂದು ಇತಿಹಾಸ ಸಂಶೋದಕ ಅಜಯ್ ಶರ್ಮ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net