

ಲಕ್ಷ್ಮೇಶ್ವರ: ಪಟ್ಟಣದ ಶ್ರೀ ಏಳು ಮಕ್ಕಳ ತಾಯಿ ದೇವಸ್ಥಾನದ ನೂತನ ಗೋಪುರದ ಕಳಸಾರೋಹಣ, ಜಾತ್ರಾ ಮಹೋತ್ಸವ ಮತ್ತು ಡೋಹರ ಕಕ್ಕಯ್ಯನವರ ಜಯಂತ್ಯುತ್ಸವ ನಿಮಿತ್ತ ಮಂಗಳವಾರ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ನಡೆದ ಧರ್ಮಸಭೆಯಲ್ಲಿ ಹುಬ್ಬಳ್ಳಿ ಮೂರುಸಾವಿರ ಮಠದ ಡಾ. ಶ್ರೀ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಡೋಹರ ಕಕ್ಕಯ್ಯನವರು ಭಕ್ತಿ ಶ್ರೇಷ್ಠತೆಯನ್ನು ಮೆರೆದಿದ್ದರು. ಕಲ್ಯಾಣದಲ್ಲಿ ಕ್ರಾಂತಿಯಾದಾಗ ವಚನ ಸಾಹಿತ್ಯ ಸಂರಕ್ಷಣೆ ಮಾಡುವ ಹೊಣೆಗಾರಿಕೆಯನ್ನು ಹೊತ್ತು ಮೂರು ಸಾವಿರ ಶರಣರು ಹುಬ್ಬಳ್ಳಿ ಮಠಕ್ಕೆ ಬರುತ್ತಾರೆ. ಇವರಲ್ಲಿ ಶರಣ ಕಕ್ಕಯ್ಯನವರು ಪ್ರಮುಖರಾಗಿದ್ದರು. 3 ಸಾವಿರ ಶರಣರು ಮಠಕ್ಕೆ ಬಂದು ಹೋಗಿದ್ದರಿಂದ ಮೂರುಸಾವಿರ ಮಠ ಎಂದು ಹೆಸರು ಬಂದಿದೆ ಎಂದರು.
ಸಣ್ಣ ಸಮಾಜ ಎಂದು ಕೀಳುರಿಮೆ ಬೇಡ. ಸಂಸ್ಕಾರ, ಭಕ್ತಿಯಿಂದ ಉನ್ನತ ಸ್ಥಾನದಲ್ಲಿದ್ದೀರಿ. ಸಮಾಜಕ್ಕೆ ಒಳ್ಳೆಯ ವಿಚಾರ ಮಾಡಿ, ಮಕ್ಕಳಿಗೆ ಉತ್ತಮ ವಿಚಾರ, ಸಂಸ್ಕಾರ, ಶಿಕ್ಷಣ ದೊರಕಿಸಿ ಎಂದು ಸಲಹೆ ನೀಡಿದರು.
ಬೀರವಳ್ಳಿ ಗುರುದೇವ ತಪೋವನ ಪೀಠಾಧ್ಯಕ್ಷ ಗುರು ಮಾತಾಜಿ ನಂದಾತಾಯಿ ಮಾತನಾಡಿ, ಸಮಾಜ ಯಾವುದೇ ಆದರೂ ಅದಕ್ಕೆ ತನ್ನದೇ ಆದ ಸಂಸ್ಕೃತಿ, ಸಂಪ್ರದಾಯ ಇರುತ್ತದೆ. ಡೋಹರ ಕಕ್ಕಯ್ಯನವರು ತಮ್ಮ ಭಕ್ತಿ ನಿಷ್ಠೆಯಿಂದ ಸಮಾಜಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಶ್ರೀ ಏಳು ಮಕ್ಕಳ ತಾಯಿ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಪೂರ್ಣಾಜಿ ಖರಾಟೆ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕರಾದ ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಠ್ಠಲ್ ಪೊಳ, ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಉಪಾಧ್ಯಕ್ಷ ಪೀರದೋಷ ಆಡೂರ, ಪೂಜಾ ಖರಾಟೆ, ನಾಗೇಂದ್ರಪ್ಪ ಖರಾಟೆ, ಫಕೀರಪ್ಪ ನಾರಾಯಣಕರ, ಓಂಕಾರೆಪ್ಪ ಗಜಾಕೋಶ, ವಾಸಪ್ಪ ಗಜಾಕೋಶ, ತಿಪ್ಪಣ್ಣ ಖರಾಟೆ, ಘಂಟೆಪ್ಪ ಗಜಾಕೋಶ, ಪ್ರಭು ನಾರಾಯಣಕರ, ಮೋಹನ ಗಜಾಕೋಶ, ಪರಮಾನಂದ ಘೋಡ್ಕೆ ಇತರರಿದ್ದರು. ಬಸವರಾಜ ಖರಾಟೆ, ನಿಖಿತಾ ಶೇರಖಾನೆ, ರಾಜು ಖರಾಟೆ, ಸತೀಶ ನಾರಾಯಣಕರ ನಿರ್ವಹಿಸಿದರು.