

ಬೆಂಗಳೂರು: ಜಕ್ಕೂರಿನ ಅಮೇಜಾನ್ ಸಪ್ಲೈ ಪಾಯಿಂಟ್ ಗೋದಾಮಿಗೆ ಸಿನಿಮೀಯ ಶೈಲಿಯಲ್ಲಿ ನುಗ್ಗಿದ ಕಳ್ಳರು 10 ಲಕ್ಷ ರೂ.ಯಿದ್ದ ಲಾಕರ್‌ನ್ನು ಕದಿಯಲು ವಿಫಲ ಯತ್ನ ನಡೆಸಿದ್ದಾರೆ. ಶ್ವಾನವೊಂದರ ಸಹಾಯದಿಂದ ಪೊದೆಯೊಳಗೆ ಕಳ್ಳರು ಎಸೆದಿದ್ದ 60 ಕೆ.ಜಿಯ ಲಾಕರ್ ಪತ್ತೆಹಚ್ಚಿದ ಸಂಪಿಗೆಹಳ್ಳಿ ಪೊಲೀಸರು ಮ್ಯಾನೇಜರ್‌ಗೆ ಒಪ್ಪಿಸಿದ್ದಾರೆ.
ಜಕ್ಕೂರಿನಲ್ಲಿ ಅಮೇಜಾನ್ ಸಪ್ಲೈಪಾಯಿಂಟ್ ಗೋದಾಮಿದ್ದು, ಇದರ ಹಿಂಬದಿ ಹಾಗೂ ಮುಂಬದಿ ಗೇಟ್‌ಗಳಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳನ್ನು ನೇಮಿಸಲಾಗಿತ್ತು. ಜು.17ರಂದು ಸಂಗ್ರಹವಾಗಿದ್ದ 10 ಲಕ್ಷ ರೂ.ನ್ನು ಮ್ಯಾನೇಜರ್ ಲಾಕರ್‌ನಲ್ಲಿಟ್ಟು ಗೋದಾಮಿಗೆ ಬೀಗ ಹಾಕಿ ಹೋಗಿದ್ದ. ಅದೇ ದಿನ ತಡರಾತ್ರಿ 12.30ರಲ್ಲಿ ಮುಂದಿನ ಗೇಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸೆಕ್ಯೂರಿಟಿಗಾರ್ಡ್ ಊಟ ಮಾಡಿ ಬರುವುದಾಗಿ ಹೇಳಿ ಹೊರ ಹೋಗಿದ್ದ. ಹೀಗಾಗಿ ಹಿಂಬದಿ ಗೇಟ್‌ನಲ್ಲಿದ್ದ ಸೆಕ್ಯೂರಿಟಿಗಾರ್ಡ್ ಗೋದಾಮಿನ ಮುಂಬದಿ ಬಂದು ಕುಳಿತಿದ್ದ. ಆ ವೇಳೆ ಜೋರಾಗಿ ಮಳೆ ಬಂದಿತ್ತು. ಮಳೆಯಿಂದ ತಪ್ಪಿಸಿಕೊಳ್ಳಲು ಸೆಕ್ಯೂರಿಟಿಗಾರ್ಡ್ ಪಕ್ಕದಲ್ಲಿದ್ದ ಶೌಚಗೃಹಕ್ಕೆ ಹೋಗಿ ಅಲ್ಲೇ ನಿದ್ದೆಗೆ ಜಾರಿದ್ದ. ಇತ್ತ ಮಳೆ ಬರುತ್ತಿದ್ದ ಹಿನ್ನೆಲೆಯಲ್ಲಿ ಊಟಕ್ಕೆ ಹೋಗಿದ್ದ ಸೆಕ್ಯೂರಿಟಿಗಾರ್ಡ್ ಸಹ ವಾಪಾಸ್ಸಾಗಿರಲಿಲ್ಲ.
ಕಟ್ಟರ್ ಯಂತ್ರದಿಂದ ಬಾಗಿಲು ಮುರಿದರು:
ಇದೇ ಸಂದರ್ಭಕ್ಕೆ ಕಾಯುತ್ತಿದ್ದ ಕಳ್ಳರು 10 ಅಡಿ ಎತ್ತರದ ಕಾಂಪೌಂಡ್ ಜಿಗಿದು ಅಮೇಜಾನ್ ಸಪ್ಲೈಪಾಯಿಂಟ್ ಆವರಣದೊಳಗೆ ಪ್ರವೇಶಿಸಿದ್ದರು. ನಂತರ ಗೋದಾಮಿನ ಮುಂದೆ ಅಳವಡಿಸಿದ್ದ ಸಿಸಿಕ್ಯಾಮರಾ ತುಂಡರಿಸಿ, ಕ್ಯಾಮರಾಗೆ ವಿದ್ಯುತ್ ಸರಬರಾಜಾಗುತ್ತಿದ್ದ ವೈಯರ್‌ನ್ನು ತಾವು ತಂದಿದ್ದ ಕಟ್ಟರ್ ಯಂತ್ರಕ್ಕೆ ಜಾಯಿನ್ ಮಾಡಿ ಕಟ್ಟರ್ ಸಹಾಯದಿಂದ ಬಾಗಿಲಿನ ಲಾಕ್ ಮುರಿದು ಗೋದಾಮಿನೊಳಗೆ ಪ್ರವೇಶಿಸಿದ್ದರು. ಗೋದಾಮಿನೊಳಗಿದ್ದ ಡಿವಿಆರ್‌ನ ವೈಯರ್‌ಗಳನ್ನು ತುಂಡರಿಸಿ ಡಿವಿಯರ್‌ನ್ನು ಕವರ್‌ವೊಂದರಲ್ಲಿ ತುಂಬಿದ್ದರು. ನಂತರ 60 ಕೆಜಿ ತೂಕದ ಲಾಕರ್‌ನ್ನು ಗೋದಾಮಿನಿಂದ ಹೊರ ತಂದು ಕಟ್ಟರ್ ಯಂತ್ರದ ಮೂಲಕ ತುಂಡರಿಸಲು ಪ್ರಯತ್ನಿಸಿದ್ದರು.
ಏನೇ ಮಾಡಿದರೂ ಲಾಕರ್ ಓಪನ್ ಮಾಡಲು ಸಾಧ್ಯವಾಗಿರಲಿಲ್ಲ. ಇತ್ತ 10 ಅಡಿ ಎತ್ತರದ ಕಂಪೌಂಡ್ ಮೂಲಕ 60 ಕೆ.ಜಿ.ತೂಕದ ಲಾಕರ್ ಹೊತ್ತೊಯ್ಯಲಾಗದೇ 200 ಅಡಿ ದೂರದಲ್ಲಿದ್ದ ಪೊದೆಯೊಂದರಲ್ಲಿ ಎಸೆದು ಪರಾರಿಯಾಗಿದ್ದರು.
ಲಾಕರ್ ಪತ್ತೆಹಚ್ಚಿದ ಶ್ವಾನ:
ಊಟಕ್ಕೆಂದು ಹೋಗಿದ್ದ ಸೆಕ್ಯೂರಿಟಿಗಾರ್ಡ್ ಮುಂಜಾನೆ ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿತ್ತು. ಶೌಚಗೃಹದಲ್ಲಿ ನಿದ್ದೆಗೆ ಜಾರಿದ್ದ ಮತ್ತೋರ್ವ ಸೆಕ್ಯೂರಿಟಿಗಾರ್ಡ್‌ನ್ನು ಪ್ರಶ್ನಿಸಿದಾಗ ತನಗೇನೂ ಗೊತ್ತಿಲ್ಲ ಎಂದು ಉತ್ತರಿಸಿದ್ದ. ಗೋದಾಮಿನ ಮ್ಯಾನೇಜರ್ ಈ ಬಗ್ಗೆ ಸಂಪಿಗೆಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡದೊಂದಿಗೆ ಸ್ಥಳಕ್ಕೆ ಬಂದು ಪರಿಶೀಲಿಸುತ್ತಿದ್ದಾಗ ಲಕ್ಷ್ಮೀ ಹೆಸರಿನ ಶ್ವಾನ ಪೊದೆಯೊಂದರ ಬಳಿ ನಿಂತಿತ್ತು. ಅನುಮಾನದ ಮೇರೆಗೆ ಪೊಲೀಸ್ ಸಿಬ್ಬಂದಿ ಸುತ್ತ-ಮುತ್ತ ಪರಿಶೀಲಿಸಿದಾಗ ಪೊದೆಯೊಳಗೆ ಕಳ್ಳರು ಎಸೆದಿದ್ದ ಲಾಕರ್ ಪತ್ತೆಯಾಗಿತ್ತು. ನಂತರ ಪೊಲೀಸರು ಲಾಕರ್‌ನ್ನು ಗೋದಾಮಿನ ಮ್ಯಾನೇಜರ್‌ಗೆ ಹಸ್ತಾಂತರಿಸಿದ್ದಾರೆ. ಲಾಕರ್ ಪತ್ತೆಹಚ್ಚಿದ ಶ್ವಾನವು ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಈ ಹಿಂದೆಯೂ ಕೆಲ ಪ್ರಕರಣಗಳಲ್ಲಿ ಲಕ್ಷ್ಮೀ ಆರೋಪಿಗಳ ಸುಳಿವು ನೀಡಿ ಪೊಲೀಸರಿಗೆ ನೆರವಾಗಿದೆ ಎಂದು ತಿಳಿದು ಬಂದಿದೆ. ತಲೆಮರೆಸಿಕೊಂಡಿರುವ ಕಳ್ಳರಿಗಾಗಿ ಶೋಧ ನಡೆಸಲಾಗುತ್ತಿದೆ.