

ಕಾರವಾರ: ಕಳೆದ ಎಂಟುವರೆ ತಿಂಗಳಲ್ಲಿ ಜಿಲ್ಲೆಯ 6 ಸಾವಿರಕ್ಕೂ ಅಧಿಕ ಜನರಿಗೆ ನಾಯಿಗಳು ಕಚ್ಚಿವೆ.!!
ಹೌದು ಜಿಲ್ಲೆಯ ವಿವಿಧ ಶಹರಗಳಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದು ಜನ ಸಾಯಂಕಾಲವಾದರೆ ಓಡಾಡಲೂ ಭಯಪಡುವಂತಾಗಿದೆ.
ಬೆಳಗಿನಜಾವ ಪತ್ರಿಕೆ ಹಾಕುವವರು, ಹಾಲು ಹಾಕುವರ ಮೇಲೆ ದಾಳಿ ಮಾಡುತ್ತಿವೆ. ರಾತ್ರಿ ಓಡಾಡುವವರನ್ನು ಮುತ್ತಿ ಬೊಗಳಿ ಭಯ ಹುಟ್ಟಿಸುತ್ತಿವೆ. ಕಚ್ಚಿ ಕಾಯಿಲೆಯ ಆತಂಕ ತರುತ್ತಿವೆ.
ಅಲ್ಲಲ್ಲಿ ರೇಬೀಸ್‌ಗೆ ತುತ್ತಾದ ನಾಯಿಗಳ ಕಾಟವೂ ಕಂಡುಬರುತ್ತಿದೆ. ಕಾರವಾರದ ಬೈತಖೋಲ್‌ನಲ್ಲಿ ಬುಧವಾರ ಒಂದೇ ದಿನ 8 ಕ್ಕೂ ಅಽಕ ಜನರ ಮೇಲೆ ಬೀದಿ ನಾಯಿಯೊಂದು ದಾಳಿ ಮಾಡಿದೆ. ಶಿರವಾಡ ರೈಲ್ವೆ ನಿಲ್ದಾಣದಲ್ಲಿ ನಾಯಿ ಕಾಟವಿದ್ದ ಬಗ್ಗೆ ವರದಿಯಾಗಿದೆ.
ಆರೋಗ್ಯ ಇಲಾಖೆಯ ದಾಖಲೆಗಳ ಪ್ರಕಾರ ಜನವರಿಯಿಂದ ಸೆಪ್ಟೆಂಬರ್‌ವರೆಗೆ ಜಿಲ್ಲೆಯಲ್ಲಿ 6045 ಜನರಿಗೆ ನಾಯಿಗಳು ಕಡಿದಿವೆ.
ಮುಖ್ಯವಾಗಿ ಶಿರಸಿ, ಹಳಿಯಾಳ, ಭಟ್ಕಳ, ಕಾರವಾರ, ಕುಮಟಾ ಭಾಗದಲ್ಲಿ ನಾಯಿ ಕಡಿತ ಸಂಖ್ಯೆ ಹೆಚ್ಚಿದ್ದು, ಒಟ್ಟಾರೆ ಸಂಖ್ಯೆಯಲ್ಲಿ ಬೀದಿ ನಾಯಿಗಳಿಂದ ಕಡಿತಕ್ಕೊಳಗಾದವರೇ ಹೆಚ್ಚಿದ್ದಾರೆ. 2022 ರ ಸೆಪ್ಟೆಂಬರ್ ವರದಿಯಂತೆ ಹಿಂದಿನ 1 ವರ್ಷದಲ್ಲಿ ಸುಮಾರು 6300 ಜನರು ನಾಯಿ ದಾಳಿಗೊಳಪಟ್ಟಿದ್ದರು.
ಬೀದಿ ನಾಯಿಗಳನ್ನು ಹಿಡಿದು ಕಾಡಿಗೆ ಬಿಡುವುದು, ಅವುಗಳನ್ನು ಸಾಯಿಸುವುದನ್ನು ಮಾಡಲು ಅವಕಾಶವಿಲ್ಲ. ಹಾಗೇನಾದರೂ ಮಾಡಿದಲ್ಲಿ ಪ್ರಾಣಿ ಪ್ರಿಯರಿಂದ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರು ಪ್ರತಿಭಟನೆ ಎದುರಿಸಬೇಕಾಗುತ್ತದೆ. ಆದರೆ, ಅವುಗಳ ಸಂಖ್ಯೆಯನ್ನು ತಗ್ಗಿಸಲು ಸಂತಾನ ಶಕ್ತಿ ಹರಣ ಶಸ್ತç ಚಿಕಿತ್ಸೆ ಮಾಡಲು ಅವಕಾಶವಿದೆ.
ಇದನ್ನೂ ಓದಿ:ಸೂಕ್ತ ಎಚ್ಚರಿಕೆ ವಹಿಸದಿದ್ದರೆ ಮುಂದಿನ ಕೆಲವು ವರ್ಷಗಳಲ್ಲಿ 7.6 ಕೋಟಿ ಸಾವು ಸಾಧ್ಯತೆ!
2019 ರ ಜಾನುವಾರು ಗಣತಿಯಂತೆ ಉತ್ತರ ಕನ್ನಡ ಜಿಲ್ಲೆಯ ಶಹರ ಪ್ರದೇಶಗಳಲ್ಲಿ 67,610 ಸೇರಿ 75,151 ಶ್ವಾನಗಳಿವೆ ಎಂದು ಅಂದಾಜಿಸಲಾಗಿದೆ. (ಈ ನಾಲ್ಕು ವರ್ಷಗಳಲ್ಲಿ ಅವುಗಳ ಸಂಖ್ಯೆ 84 ಸಾವಿರ ತಲುಪಿರಬಹುದು. ಆದರೆ, ನಿಖರ ಲೆಕ್ಕ ಸಿಗದು.) ಒಟ್ಟಾರೆ ನಾಯಿಗಳ ಪೈಕಿ ಬೀದಿ ನಾಯಿಗಳ ಸಂಖ್ಯೆ 50 ಕ್ಕೂ ಅದಿಕ ಇರಬಹುದು ಎಂದು ಅಂದಾಜಿಸಲಾಗಿದೆ. ಜಿಲ್ಲೆಯ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತç ಚಿಕಿತ್ಸೆ ಮಾಡಲು ಸುಮಾರು 3 ಕೋಟಿ ರೂ. ಯೋಜನೆ ರೂಪಿಸಲಾಗಿತ್ತು. ಕಾರವಾರ ಶಹರದಲ್ಲಿ ಒಂದು ವರ್ಷ ಮಾಡಿಡಲಾಗಿತ್ತು. ನಂತರ ವಿವಿಧ ಅಡೆತಡೆಗಳಿಂದ ಸಂತಾನ ಶಕ್ತಿ ಹರಣ ಕಾರ್ಯವೂ ನಡೆದಿಲ್ಲ.
ನಾಯಿ ಕಡಿತ ಪ್ರಕರಣಗಳು
(ಜನವರಿಯಿಂದ ಸೆಪ್ಟೆಂಬರ್‌ವರೆಗೆ )
ತಾಲೂಕು ನಾಯಿಗಳ ಸಂಖ್ಯೆ ನಾಯಿ ಕಡಿತ
(2019 ರ ಜನಗಣತಿ) (ಜನವರಿ-ಸೆಪ್ಟೆಂಬರ್)
ಅಂಕೋಲಾ 7914- 212
ಭಟ್ಕಳ 3424- 723
ಹಳಿಯಾಳ 2779- 835
ಹೊನ್ನಾವರ 8481- 266
ಕಾರವಾರ 4673- 636
ಕುಮಟಾ 8756- 799
ಮುಂಡಗೋಡ 6373 -116
ಸಿದ್ದಾಪುರ 6403- 684
ಶಿರಸಿ 10581- 1366
ಜೊಯಿಡಾ 4374 -80
ಯಲ್ಲಾಪುರ 11393- 328