ನಾಯಿಗಳ ಆರೈಕೆ ಲಕ್ಷ್ಮೀ ಕುಂಚೂರ ಹೆಗ್ಗಳಿಕೆ

d
Published on

ಬೆಳಗಾವಿ: ಇದು ಅಪರೂಪದ ತಾಯಿ-ಮಗಳ ಜೋಡಿ. ಇವರಿಗೆ ಪ್ರಾಣಿಗಳ ಆರೈಕೆ ಎಂದರೆ ಅಚ್ಚುಮೆಚ್ಚು. ಬೆಳಗಾವಿ ಮಹಾನಗರದ ಯಾವುದೇ ಬೀದಿಯಲ್ಲಿ ನಾಯಿಗಳು ಅಪಘಾತಕ್ಕೀಡಾಗಿ ಗಾಯಗೊಂಡರೆ, ತಕ್ಷಣವೇ ಅವುಗಳನ್ನು ಪಶು ವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡುತ್ತಾರೆ.

ತಮ್ಮ ಮನೆ ಮಕ್ಕಳಂತೆ ಲಾಲನೆ-ಪಾಲನೆ ಮಾಡುತ್ತಾರೆ. ಮಾನವೀಯ ನೆಲೆಗಟ್ಟಿನಲ್ಲಿ ಇಂಥದ್ದೊಂದು ಸೇವೆ ಮಾಡುತ್ತಿರುವುದು ಟಿಳಕವಾಡಿಯ ಲಕ್ಷ್ಮೀ ಕುಂಚೂರ ಮತ್ತು ಅವರ ಪುತ್ರಿ ಭಾಗ್ಯಶ್ರೀ.

‘ನನಗೆ ಬಾಲ್ಯದಿಂದಲೂ ನಾಯಿ, ಬೆಕ್ಕುಗಳನ್ನು ಕಂಡರೆ ಬಲುಪ್ರೀತಿ. ಯಾವುದೇ ಪ್ರಾಣಿ ವಾಹನಗಳಡಿ ಸಿಲುಕಿ ನರಳುತ್ತಿದ್ದರೆ, ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತಿದ್ದೆ. ಈ ಸೇವೆಯಲ್ಲೇ ನೆಮ್ಮದಿ ಕಂಡಿದ್ದೆ.

ಇತ್ತೀಚಿನ ವರ್ಷಗಳಲ್ಲಿ ನಗರ ವ್ಯಾಪ್ತಿಯಲ್ಲಿ ಪ್ರಾಣಿಗಳು ಅಪಘಾತಕ್ಕೀಡಾಗುವ ಸಂಖ್ಯೆ ಹೆಚ್ಚಾಗಿರುವುದು ಮನಸ್ಸಿಗೆ ಬೇಸರ ತಂದಿತು. ಹಾಗಾಗಿ, ಇಂಥ ಪ್ರಾಣಿಗಳಿಗೆ ನೆರವಾಗಲೆಂದು ನಾಲ್ಕೈದು ವರ್ಷಗಳ ಹಿಂದೆ ಬೆಳಗಾವಿ ತಾಲೂಕಿನ ವಾಘವಾಡೆಯಲ್ಲಿ 1 ಎಕರೆ ಜಾಗದಲ್ಲೇ ಶೆಡ್ ನಿರ್ಮಿಸಿದ್ದೇನೆ. ಅಲ್ಲಿಯೇ ಹತ್ತಾರು ಪ್ರಾಣಿಗಳಿಗೆ ಆಹಾರ ಉಣಬಡಿಸಿ ಸಂತಸಗೊಳ್ಳುತ್ತೇನೆ’ ಎಂದು ಮುಗುಳ್ನಗುತ್ತಾರೆ ಲಕ್ಷ್ಮೀ.

ತಾಯಿಯ ಕಾರ್ಯಕ್ಕೆ ಮಗಳ ಸಾಥ್: ಸರ್ಕಾರಿ ನೌಕರರಾಗಿದ್ದ ಪತಿ ಈಗ ನಿವೃತ್ತರಾಗಿದ್ದಾರೆ. ಅವರಿಗೆ ಬರುವ ಮಾಸಿಕ ಪಿಂಚಣಿ ಮೊತ್ತ ಮತ್ತು ಸೀರೆ ಮಾರಾಟದಲ್ಲಿ ನನಗೆ ಬರುವ ಆದಾಯದಲ್ಲಿ ಈ ಸೇವೆ ಮಾಡುತ್ತಿದ್ದಾರೆ. ಬ್ಯಾಡ್ಮಿಂಟನ್ ಆಟಗಾರ್ತಿಯಾಗಿರುವ ಭಾಗ್ಯಶ್ರೀ ಕೂಡ ಈಗ ತಾಯಿಯ ಸಾಮಾಜಿಕ ಸೇವೆಗೆ ಸಾಥ್ ನೀಡಿದ್ದಾರೆ.

‘ಪ್ರಾಣಿಗಳಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸುವುದಷ್ಟೇ ಅಲ್ಲ, ಅವುಗಳ ರಕ್ಷಣೆಗೆ ಸಂಬಂಧಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಜನರಲ್ಲಿ ಪ್ರಾಣಿ ಪ್ರೀತಿ ಬೆಳೆಸಲು ಶ್ರಮಿಸುತ್ತಿದ್ದೇವೆ. ಇದರಲ್ಲೇ ನೆಮ್ಮದಿಯೂ ದಕ್ಕಿದೆ’ ಎನ್ನುತ್ತಾರೆ ಭಾಗ್ಯಶ್ರೀ.

| ಮಂಜುನಾಥ ಕೋಳಿಗುಡ್ಡ, ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net