

ಬೆಳಗಾವಿ: ನಗರದ ಪೊಲೀಸ್ ಭವನದಲ್ಲಿ ಸೋಮವಾರ ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ಬೆಳಗಾವಿ ಉತ್ತರ ವಲಯದಲ್ಲಿ 7 ಜಿಲ್ಲೆಯ ಪೊಲೀಸರಿಗೆ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟ ಜರುಗಿತು. ಈ ವೇಳೆ ಪೊಲೀಸ್ ಇಲಾಖೆಗಳ ಶ್ವಾನದಳ, ೆರೆನ್ಸಿಕ್ ಸೇರಿ ದಳದ ಕಾರ್ಯವೈಖರಿ ಪ್ರದರ್ಶಿಸಲಾಯಿತು.
ನಗರ, ಹುಬ್ಬಳ್ಳಿ, ಧಾರವಾಡ ನಗರ ಮತ್ತು ಜಿಲ್ಲೆ, ಗದಗ, ಬಾಗಲಕೋಟೆ, ವಿಜಯಪುರ, ಹಾವೇರಿ ಜಿಲ್ಲೆಗಳು ಮತ್ತು 2 ಕಮಿಷನರೇಟ್‌ಗಳ ವ್ಯಾಪ್ತಿಯಿಂದ ಸುಮಾರು 150ಕ್ಕೂ ಹೆಚ್ಚು ಪೊಲೀಸರು ಉತ್ಸಾಹದಿಂದ ಭಾಗವಹಿಸಿದ್ದರು. ವೈಜ್ಞಾನಿಕ ತನಿಖೆ, ವೃತ್ತಿ ಕೌಶಲ ಮಾಹಿತಿ ಸೇರಿ ವಿವಿಧ ವಿಷಯಗಳ ಕುರಿತು ಸ್ಪರ್ಧೆಗಳು ಮತ್ತು ಗೋಷ್ಠಿಗಳು ಜರುಗಿದವು.
ಕರ್ತವ್ಯಕೂಟದಲ್ಲಿ ಮುಖ್ಯವಾಗಿ ವೈಜ್ಞಾನಿಕ ಫೋರೆನ್ಸಿಕ್, ಶ್ವಾನ ದಳ, ಛಾಯಾಗ್ರಹಣ ಮತ್ತು ಲಿಖಿತ ಪರೀಕ್ಷೆಗಳನ್ನು ನಡೆಸಲಾಯಿತು. ಶ್ವಾನದಳದಿಂದ ಬ್ಯಾಗ್ ತಪಾಸಣೆ, ಆರೋಪಿಗಳ ಪತ್ತೆ, ಶಂಕಿತ ವಸ್ತುಗಳ ಪತ್ತೆಯ ಪ್ರಾತ್ಯಕ್ಷಿಕೆ ಪ್ರದರ್ಶಿಸಲಾಯಿತು. ಅಲ್ಲದೇ, ಅಪರಾಧ ಪ್ರಕರಣಗಳ ವೇಳೆ ಯಾವ ರೀತಿ ಛಾಯಾಗ್ರಹಣ ಮಾಡಬೇಕು ಎಂಬ ಕುರಿತು ಮಾಹಿತಿ ನೀಡಲಾಯಿತು.
ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ, ಎಸ್ಪಿ ಡಾ.ಭೀಮಾಶಂಕರ ಗುಳೇದ, ಡಿಸಿಪಿ ನಾರಾಯಣ ಬರಮಣಿ, ಡಿಸಿಪಿ ನಿರಂಜನ ಅರಸ ಇತರರಿದ್ದರು.