ಮೈಸೂರಿನಲ್ಲಿ ಆಕರ್ಷಿಸಿದ ಶ್ವಾನ ಪ್ರದರ್ಶನ

Dog show attracts attention in Mysore
Published on

ಮೈಸೂರು: ಕೆನಲ್ ಕ್ಲಬ್ ಆಫ್ ಮೈಸೂರು ವತಿಯಿಂದ ನಗರದ ಸ್ಕೌಟ್ ಮತ್ತು ಗೈಡ್ಸ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಶ್ವಾನ ಪ್ರದರ್ಶನದಲ್ಲಿ ವಿವಿಧ ತಳಿಯ ಮುದ್ದಾದ ಶ್ವಾನಗಳು ಪ್ರತಿಯೊಬ್ಬರ ಗಮನ ಸೆಳೆಯಿತು.

ದೇಶ, ವಿದೇಶದ ಶ್ವಾನಗಳು ತಮ್ಮ ತುಂಟಾಟ, ಬೆಡಗು ಬಿನ್ನಾಣದಲ್ಲಿ ಹೆಜ್ಜೆ ಹಾಕುವುದರ ಮೂಲಕ ಪ್ರೇಕ್ಷಕರನ್ನು ರಂಜಿಸಿ ನೂರಾರು ಮಂದಿಯನ್ನು ಆಕರ್ಷಿಸಿದವು. ಶ್ವಾನಗಳ ಆಟ ಪಾಠ, ಬುದ್ಧಿವಂತಿಕೆ, ಜಾಣ್ಮೆ, ಮುಗ್ಧತೆ, ತುಂಟಾಟ, ತಾಳ್ಮೆ ಹಾಗೂ ಅವುಗಳ ಪ್ರೀತಿಯನ್ನು ಪ್ರದರ್ಶನದಲ್ಲಿ ನೆರೆದಿದಂತಹ ಪ್ರೇಕ್ಷಕರು ಕಣ್ತುಂಬಿಕೊಂಡರು. ಆಗಮಿಸಿದ ಎಲ್ಲರು ಮುದ್ದು ಮುದ್ದಾದ ಶ್ವಾನಗಳನ್ನು ಕಂಡು ಪ್ರಾಣಿ ಪ್ರಿಯರು ಖುಷಿ ಪಟ್ಟರು. ಪ್ರದರ್ಶನದಲ್ಲಿ ನೆರೆದಿದಂತಹ ಮಕ್ಕಳು ಶ್ವಾನಗಳ ಕಂಡು ತುಂಬಾ ಸಂತೋಷ ಪಟ್ಟರು. ಮಕ್ಕಳು ಸೇರಿದಂತೆ ಪ್ರತಿಯೊಬ್ಬರು ತಮ್ಮ ನೆಚ್ಚಿನ ತಳಿಯ ಶ್ವಾನಗಳ ಮುಂದೆ ನಿಂತು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ಶ್ವಾನ ಪ್ರದರ್ಶನದಲ್ಲಿ 3 ಕೆ.ಜಿ. ತೂಕ ಇರುವ ಮಿನೇಚರ್ ಪಿಂಷರ್‌ನಿಂದ 100 ಕೆ.ಜಿ.ವರೆಗೆ ತೂಕ ಇರುವ ಸೇಂಟ್ ಬರ್ನಾಡ್ ಸೇರಿದಂತೆ ವಿವಿಧ ಶ್ವಾನಗಳು ಭಾಗವಹಿಸಿದ್ದವು. ಗ್ರೇಟ್‌ಡೇನ್, ಇಂಗ್ಲಿಷ್ ಮ್ಯಾಸ್ತಿಫ್, ಬುಲ್‌ಡಾಗ್, ಸೈಬೀರಿಯನ್ ಅಸ್ಕಿ, ಗೋಲ್ಡನ್ ರಿಟ್ರಿವರ್, ಲ್ಯಾಬ್ರಡಾರ್, ಜರ್ಮನ್ ಶಪರ್ಡ್, ಪಗ್, ಚೌಚೌ, ಬಾಕ್ಸರ್, ದೇಶೀಯ ತಳಿಗಳಾದ ಮುಧೋಳ್, ಕೊಂಬಾಯ್, ಕ್ಯಾರವಾನ್ ಹೌಂಡ್, ರಾಜಪಾಳ್ಯಂ ಮುಂತಾದ ತಳಿಗಳು ಗಮನ ಸೆಳೆಯಿತು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಉತ್ತಮ ಶ್ವಾನಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಟಿ. ದೇವೇಗೌಡ, ಟಿ.ಎಸ್. ಶ್ರೀವತ್ಸ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಕ್ಲಬ್ ಅಧ್ಯಕ್ಷ ಬಿ.ಪಿ. ಮಂಜುನಾಥ್, ಕಾರ್ಯದರ್ಶಿ ಡಾ.ಎಚ್. ಸಂಜೀವ ಮೂರ್ತಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net