

ಮಡಿಕೇರಿ:
ಕೊಡಗು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಮಡಿಕೇರಿ ಯುವ ದಸರಾ ಸಮಿತಿ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಶ್ವಾನ ಪ್ರದರ್ಶನ ಪ್ರಾಣಿ ಪ್ರಿಯರ ಮನಗೆಲ್ಲುವಲ್ಲಿ ಸಫಲವಾಯಿತು. ಒಂದಕ್ಕಿAದ ಒಂದು ಆಕರ್ಷಕವಾಗಿದ್ದ ಶ್ವಾನಗಳು ದಿನಪೂರ್ತಿ ಇಲ್ಲಿನ ಗಾಂಧಿ ಮೈದಾನದಲ್ಲಿ ದರ್ಬಾರ್ ನಡೆಸಿದವು. ಮನೆ ಮಗುವಿನಂತೆ ಮುದ್ದಿನಿಂದ ಸಾಕಿದ ತಮ್ಮ ತಮ್ಮ ಶ್ವಾನಗಳ ಜತೆಗೆ ಮಾಲೀಕರು ಕೂಡ ಹೆಮ್ಮೆಯಿಂದ ಫೋಸ್ ಕೊಟ್ಟು ಸಂಭ್ರಮಿಸಿದರು.
ಬಲು ಅಪರೂಪದ ಅಮೇರಿಕನ್ ಬುಲ್ ಟೆರಿಯರ್, ದೊಡ್ಡ ಗಾತ್ರದ ಮತ್ತು ದುಬಾರಿ ಬೆಲೆಯ ಗ್ರೇಟ್ ಡೆನ್, ಸೈಬೀರಿಯನ್ ಹಸ್ಕಿ, ಪುಟಾಣಿ ಆಕಾರದ ಮಿನಿಯೇಚರ್ ಪಿಂಚರ್, ಕರ್ನಾಟಕದ ವಿಶೇಷ ತಳಿಯ ಮುಧೋಳ ಹೌಂಡ್, ಬೀಗಲ್, ಜರ್ಮನ್ ಷೆಫರ್ಡ್, ಪಮೇರಿಯನ್, ಆಲ್ಸೇಷಿಯನ್, ರಾಟ್‌ವೀಲರ್, ಲ್ಯಾಬ್ರಾಡರ್, ಲಾಸಾ ಎಪ್ಸೋ, ಡ್ಯಾಷ್ ಹೌಂಡ್, ಗೋಲ್ಡನ್ ರಿಟ್ರೀವರ್, ಪಗ್ ಸೇರಿದಂತೆ 26 ವಿವಿಧ ಜಾತಿಗಳ 95 ನಾಯಿಗಳು ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಿದ್ದವು. 2 ಬೆಕ್ಕುಗಳನ್ನೂ ಪ್ರಾಣಿಪ್ರಿಯರು ಪ್ರದರ್ಶನಕ್ಕೆ ತಂದಿದ್ದರು.
ಕೊಡಗು ಮಾತ್ರವಲ್ಲದೆ ಪಕ್ಕದ ಮಂಡ್ಯ, ಮೈಸೂರು ಹಾಗೂ ಹಾಸನ ಜಿಲ್ಲೆಗಳಿಂದಲೂ ಶ್ವಾನಗಳನ್ನು ಇಲ್ಲಿ ಪ್ರದರ್ಶನಕ್ಕಾಗಿ ತರಲಾಗಿತ್ತು. ಸೈಬೀರಿಯನ್ ಹಸ್ಕಿ ತಳಿಯ ಒಟ್ಟು 11 ನಾಯಿಗಳು ಪ್ರದರ್ಶನಲ್ಲಿ ಭಾಗವಹಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ದಾಖಲೆಗೆ ಪಾತ್ರವಾದವು. ಕಳೆದ ವರ್ಷದ ತನಕ ದಸರಾ ಸಮಿತಿ ಆಶ್ರಯದಲ್ಲಿ ಶ್ವಾನ ಪ್ರದರ್ಶನ ನಡೆಯುತ್ತಿತ್ತು. ಇದೇ ಮೊದಲ ಸಲ ಕೊಡಗು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಮಡಿಕೇರಿ ಯುವ ದಸರಾ ಸಮಿತಿ ಈ ಜವಾಬ್ದಾರಿ ವಹಿಸಿಕೊಂಡಿದ್ದು, ಅಚ್ಚುಕಟ್ಟಾಗಿ ನಡೆಸುವ ಮೂಲಕ ಗಮನ ಸೆಳೆಯಿತು.
ಶ್ವಾನಗಳ ವಯೋ ಸಹಜ ಬೆಳವಣಿಗೆ, ಆರೋಗ್ಯ ಹಾಗೂ ಅವುಗಳ ಚಟುವಟಿಕೆಗಳ ಆಧಾರದ ಮೇಲೆ ಅತ್ಯುತ್ತಮ ಶ್ವಾನಗಳ ಆಯ್ಕೆ ನಡೆಯಿತು. ಪರಿಣಿತ ತೀರ್ಪುಗಾರರು ಶ್ವಾನ ಪ್ರದರ್ಶನದ ನಿಗದಿತ ಮಾನದಂಡಗಳಿಗೆ ಅನುಗುಣವಾಗಿ ಶ್ವಾನಗಳ ಆಯ್ಕೆಗಾಗಿ ಹಲವು ರೀತಿಯ ಪರೀಕ್ಷೆಗಳನ್ನು ನಡೆಸಿದರು. ಶ್ವಾನ ಮತ್ತು ಅವುಗಳ ಮಾಲೀಕರ ನಡುವಿನ ಬಾಂಧವ್ಯವನ್ನೂ ತೀರ್ಪುಗಾರಿಕೆ ಸಂದರ್ಭ ಪರಿಗಣಿಸಿದ್ದು ವಿಶೇಷವಾಗಿತ್ತು. ಕೆಲವು ಶ್ವಾನಗಳ ಜತೆಗೆ ಅವುಗಳ ಒಡನಾಡಿಯಾಗಿ ಮಕ್ಕಳು ಕೂಡ ಶ್ವಾನ ಪ್ರದರ್ಶನದ ರಿಂಗ್ ಒಳಗೆ ಹಾಜರಾಗಿ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು.
ಬೆಳಗ್ಗೆ 10.30ಕ್ಕೆ ಶ್ವಾನ ಪ್ರದರ್ಶನ ಆರಂಭದ ಬಗ್ಗೆ ಮಾಹಿತಿ ನೀಡಲಾಗಿತ್ತಾದರೂ ಶ್ವಾನ ಪ್ರಿಯರು ಈ ಸಮಯಕ್ಕಿಂತಲೂ ಮೊದಲೇ ಗಾಂಧಿ ಮೈದಾನದಲ್ಲಿ ಜಮಾಯಿಸಿದ್ದರು. ಶ್ವಾನಗಳನ್ನು ನಿಲ್ಲಿಸಿ ಫೋಟೋ ತೆಗೆಯಲು ಸೆಲ್ಫಿ ಪಾಯಿಂಟ್‌ಳ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಮಿನಿಯೇಚರ್ ಪಿಂಚರ್, ಲಾಸಾ ಎಪ್ಸೋ, ಪಗ್ ರೀತಿಯ ಮುದ್ದುಮುದ್ದಾದ ನಾಯಿಗಳ ಜತೆ ಫೋಟೋ ತೆಗೆಯಿಸಿಕೊಳ್ಳುವುದೂ ಸಾಮಾನ್ಯ ದೃಶ್ಯವಾಗಿತ್ತು. ಈ ಪುಟಾಣಿ ನಾಯಿಗಳು ಮಕ್ಕಳ ಗಮನ ಸೆಳೆಯುವಲ್ಲಿ ಯಶಸ್ವಿಯಾದವು.
ಪ್ರದರ್ಶನಕ್ಕೆ ಆಗಮಿಸಿದ್ದ ಶ್ವಾನಗಳ ಪೈಕಿ ಬಲು ಅಪರೂಪದ ಅಮೇರಿಕನ್ ಬುಲ್ ಟೆರಿಯರ್ ಪ್ರಾಣಿಪ್ರಿಯರ ಆಕರ್ಷಣೆಯ ಕೇಂದ್ರ ಬಿಂದು ಆಗಿತ್ತು. ನೋಡಲು ದೊಡ್ಡ ಗಾತ್ರವಾಗಿದ್ದರೂ ಶಾಂತ ರೀತಿಯಲ್ಲಿ ಇದ್ದ ಈ ನಾಯಿ ಬಳಿ ತೆರಳಿ ಮೈ ಮುಟ್ಟಿ, ಮಾತನಾಡಿಸಿ, ಅದರ ಮಾಲೀಕರ ಜತೆ ಒಂದಿಷ್ಟು ಚರ್ಚೆ ನಡೆಸಿ, ಈ ನಾಯಿಯ ವಿಶೇಷತೆ ಬಗ್ಗೆ ವಿಚಾರಿಸುತ್ತಿದ್ದ ದೃಶ್ಯವೂ ಕಂಡುಬAತು. ಉದ್ದುದ್ದ ಕೂದಲಿನ ಲಾಸಾ ಎಪ್ಸೋ ನಾಯಿಗಳಿಗೆ ಜುಟ್ಟು ಹಾಕಿ ಕರೆದುಕೊಂಡು ಬಂದಿದ್ದು ಕೂಡ ಆಕರ್ಷಣೀಯವಾಗಿತ್ತು.
ಪಕ್ಕದ ಹಾಸನ ಜಿಲ್ಲೆಯ ರೈತರೊಬ್ಬರು ತಾವು ಸಾಕಿದ್ದ ವಿಶೇಷ ತಳಿಯ ಕುಬ್ಜ ಗಾತ್ರದ ಮೇಕೆಯೊಂದನ್ನು ಪ್ರದರ್ಶಿಸಿ ಗಮನ ಸೆಳೆದರು. ರೈತರಿಗೆ ಸಾಕಾಣಿಕೆಗೆ ಯೋಗ್ಯವಾದ ಈ ತಳಿ ಪ್ರೌಢಾವಸ್ಥೆ ತಲುಪಿದಾಗ ಸುಮಾರು 12-14 ಕೆಜಿ ತೂಕ ಬರುತ್ತದೆ. ಇದರ ಮಾಂಸ ಪೌಷ್ಠಿಕಾಂಶಗಳಿAದ ಕೂಡಿದೆ. ಸಾಕಾಣಿಕೆಯೂ ಸುಲಭವಾಗಿದ್ದು, ರೈತರಿಗೆ ವರದಾನವಾಗಿದೆ. ಈ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಶ್ವಾನ ಪ್ರದರ್ಶನ ಸಂದರ್ಭ ಈ ಮೇಕೆಯನ್ನೂ ಪ್ರದರ್ಶನ ಮಾಡಲಾಗುತ್ತಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಈ ಶ್ವಾನ ಪ್ರದರ್ಶನದಲ್ಲಿ ಮಂಗಳೂರಿನ ಅನುಷಾ ಅವರ ಲಾಸಾ ಅಪ್ಸೋ ಜಾತಿಯ ಶ್ವಾನ ಪ್ರಥಮ ಸ್ಥಾನ ಗಳಿಸಿ 10 ಸಾವಿರ ರೂ. ನಗದು ಬಹುಮಾನ ತನ್ನದಾಗಿಸಿಕೊಂಡಿತು. ಚಿಕ್ಕಮಗಳೂರಿನ ಡಿ. ರಾಜೇಶ ಅವರ ಜರ್ಮನ್ ಷೆಪರ್ಡ್ ಶ್ವಾನ ದ್ವಿತೀಯ ಸ್ಥಾನ ಗಳಿಸಿ 7,500 ರೂ. ನಗದು ಬಹುಮಾನ ಪಡೆದುಕೊಂಡಿತು. ಮೂರನೇ ಬಹುಮಾನವನ್ನು ಪೊನ್ನಂಪೇಟೆಯ ರಕ್ಷಿತ್ ಅವರ ನೆಪೋಲಿಯನ್ ಮಸ್ತಿಫ್ ಜಾತಿಯ ಶ್ವಾನ ಪಡೆದುಕೊಂಡು 5 ಸಾವಿರ ರೂ. ನಗದು ಬಹುಮಾನ ಗಳಿಸಿತು. ಮಂಡ್ಯದ ಕೆ.ಎಂ. ಯೋಗರಾಜ್ ಅವರ ಗೋಲ್ಡನ್ ರಿಟ್ರೀವರ್ ಮತ್ತು ಚಿಕ್ಕಮಗಳೂರಿನ ವೀರೇಶ್ ಬಾಬು ಅವರ ಮುಧೋಳ ತಳಿಯ ಶ್ವಾನಗಳು ಸಮಧಾನಕರ ಬಹುಮಾನ ಗಳಿಸಿದವು. ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ನಿವೃತ್ತ ಉಪನಿರ್ದೇಶಕ ಡಾ. ಸದಕ್ಷಮೂರ್ತಿ ಮತ್ತು ಸುಳ್ಯದ ಮುಖ್ಯ ಪಶುವೈದ್ಯಕೀಯ ಅಧಿಕಾರಿ ಡಾ. ನಿತಿನ್ ಪ್ರಭು ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ಮಡಿಕೇರಿ ಯುವ ದಸರಾ ಸಮಿತಿ ವತಿಯಿಂದ ಮೊದಲ ಬಾರಿಗೆ ಆಯೋಜಿಸಿರುವ ಈ ಶ್ವಾನ ಪ್ರದರ್ಶನಕ್ಕೆ ಇಷ್ಟರ ಮಟ್ಟಿಗೆ ದೊಡ್ಡ ಪ್ರತಿಕ್ರಿಯೆ ಸಿಗುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಕೊಡಗು ಮಾತ್ರವಲ್ಲದೆ ಮಂಡ್ಯ, ಮೈಸೂರು ಹಾಗೂ ಹಾಸನ ಜಿಲ್ಲೆಗಳಿಂದಲೂ ಶ್ವಾನ ಪ್ರಿಯರು ಆಗಮಿಸಿ ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೆ ಕಾರಣವಾಗಿದ್ದಾರೆ. ನಿಗದಿತ ಮಾನದಂಡಗಳ ಮೂಲಕವೇ ಇಲ್ಲಿ ಉತ್ತಮ ಶ್ವಾನಗಳ ಆಯ್ಕೆ ನಡೆದಿದೆ.
ಡಾ. ಲಿಂಗರಾಜ ಡೊಡ್ಮನಿ, ಉಪನಿರ್ದೇಶಕ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕೊಡಗು
ಶ್ವಾನ ಪ್ರದರ್ಶನದ ಯಶಸ್ಸಿಗೆ ನಮ್ಮ ಸಮಿತಿ ಸಾಕಷ್ಟು ಶ್ರಮ ವಹಿಸಿ ಕೆಲಸ ಮಾಡಿದೆ. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯೂ ಪೂರಕ ಸಹಕಾರ ಕೊಟ್ಟಿದೆ. ಕಡಿಮೆ ಅವಧಿಯ ಸಿದ್ಧತೆಯಲ್ಲೂ ಅತ್ಯಂತ ವ್ಯವಸ್ಥಿತವಾಗಿ ಈ ಪ್ರದರ್ಶನ ನಡೆದಿದೆ. ಮುಂದಿನ ವರ್ಷದಿಂದ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಶ್ವಾನ ಪ್ರದರ್ಶನ ಮತ್ತು ಸ್ಪರ್ಧೆ ಆಯೋಜಿಸಲು ಇಂದಿನ ಈ ಯಶಸ್ಸು ಸ್ಫೂರ್ತಿ ಕೊಟ್ಟಿದೆ. ಈ ಶ್ವಾನ ಪ್ರದರ್ಶನ ಮಡಿಕೇರಿ ದಸರಾಕ್ಕೆ ವಿಶೇಷ ಕಳೆ ನೀಡಿದೆ.
ಕವನ್ ಕೊತ್ತೋಳಿ, ಅಧ್ಯಕ್ಷ, ಯುವ ದಸರಾ ಸಮಿತಿ
ಶ್ವಾನ ಪ್ರದರ್ಶನದ ಅಚ್ಚುಕಟ್ಟುತನ ಗಮನ ಸೆಳೆಯಿತು. ನಮ್ಮ ಮನೆಯ ಮುದ್ದಿನ ಶ್ವಾನಗಳ ಜತೆಗೆ ನಾವು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದೆವು. ಶ್ವಾನ ಪ್ರದರ್ಶನದ ತೀರ್ಪುಗಾರಿಕೆಯೂ ಚೆನ್ನಾಗಿತ್ತು. ನಾವು ಪ್ರೀತಿಯಿಂದ ಸಾಕಿದ ನಾಯಿಗಳನ್ನು ಇತರ ಪ್ರಾಣಿಪ್ರಿಯರಿಗೂ ತೋರಿಸಲು ಇದೊಂದು ಉತ್ತಮ ಅವಕಾಶ. ಈ ಶ್ವಾ£ Àಪ್ರದರ್ಶನದಲ್ಲಿ ಪಾಲ್ಗೊಂಡಿದ್ದು ಖುಷಿ ಕೊಟ್ಟಿತು.
ಪೊನ್ನಚ್ಚನ ಪ್ರೀತು ಮಧು, ಮಡಿಕೇರಿ