

ಮಂಗಳೂರು: ಬೀದಿ ನಾಯಿಗಳಿಗೆ ಆಹಾರ ಒದಗಿಸುವ ಶ್ವಾನಗಳ ಆಶ್ರಯದಾತೆ ಬಲ್ಲಾಳ್‌ಬಾಗ್‌ನ ರಜನಿ ಶೆಟ್ಟಿ ಮತ್ತೆ ಬಾವಿಗಿಳಿದು ನಾಯಿಯೊಂದನ್ನು ರಕ್ಷಿಸಿದ್ದಾರೆ.
ಕಳೆದ ವರ್ಷವೂ ಫೆಬ್ರವರಿ ತಿಂಗಳಲ್ಲಿ ಬಾವಿಗೆ ಬಿದ್ದಿದ್ದ ಶ್ವಾನವನ್ನು ಅವರು ರಕ್ಷಿಸಿದ್ದರು. ಈ ಬಾರಿ ಬಿಜೈನ ಯಾರೂ ವಾಸವಿಲ್ಲದ ಮನೆಯ ಆವರಣದ ಬಾವಿಗೆ ನಾಯಿಯೊಂದು ಶುಕ್ರವಾರ ರಾತ್ರಿ ಬಿದ್ದಿತ್ತು,
ಆ ಬಗ್ಗೆ ರಜನಿ ಅವರಿಗೆ ಫೋನ್ ಬಂದಿತ್ತು. ಅಲ್ಲಿಗೆ ತಮ್ಮ ಪತಿ ದಾಮೋದರ್ ಹಾಗೂ ಪುತ್ರಿ ಶ್ವೇತಾ, ರಿತಿಕಾರೊಂದಿಗೆ ತೆರಳಿದರು. ಸುಮಾರು 50 ಅಡಿ ಆಳದ ಬಾವಿಯಲ್ಲಿ ನೀರು ಇದ್ದ ಕಾರಣ ನಾಯಿಗೆ ಹೆಚ್ಚೇನೂ ಏಟಾಗದೆ ಬದಿಯಲ್ಲಿತ್ತು. ಹಗ್ಗ ಮೂಲಕ ಇಳಿದ ರಜನಿ ಅವರಿಗೆ ಕೆಳಗೆ ಉಸಿರುಗಟ್ಟುವಂತಾದರೂ ಸಾವರಿಸಿಕೊಂಡು ನಾಯಿಗೆ ಒಂದು ಹಗ್ಗವನ್ನು ಕಟ್ಟಿ ಮೊದಲು ಮೇಲಕ್ಕೆಳೆಯುವಂತೆ ಸೂಚಿಸಿದರು. ಬಳಿಕ ಅವರೂ ಹಗ್ಗದ ಮೂಲಕ ಮೇಲಕ್ಕೆ ಬಂದರು.
ಅಲ್ಲಿ ಯಾರೂ ಇರಲಿಲ್ಲ, ನಾನೂ, ಪತಿ ಹಾಗೂ ಪುತ್ರಿಯರು ಹೋಗಿದ್ದೆವು. ಸಾಕಷ್ಟು ಆಳವಿರುವ ಬಳಕೆ ಇಲ್ಲದ ಬಾವಿಯಾದ್ದರಿಂದ ಬಾವಲಿಗಳೂ ಇದ್ದವು. ಆದರೂ ನಾಯಿಯನ್ನು ಹೊರತೆಗೆದಿದ್ದೇನೆ. ನಾಯಿಗೆ ಯಾವುದೇ ಗಾಯವಾಗಿಲ್ಲ, ಬೀದಿ ನಾಯಿಯಾಗಿದ್ದು, ಅದನ್ನು ಪಕ್ಕದ ಮನೆಯವರೊಬ್ಬರು ಸಾಕಲು ತೆಗೆದುಕೊಂಡು ಹೋಗಿರುವುದಾಗಿ ರಜನಿ ಶೆಟ್ಟಿ ತಿಳಿಸಿದ್ದಾರೆ.
ಪುಟ್ಟ ಬಾಡಿಗೆ ಮನೆಯಲ್ಲಿ ರಿಕ್ಷಾ ಚಾಲಕ ಪತಿ ಹಾಗೂ ಮೂವರು ಮಕ್ಕಳೊಂದಿಗೆ ವಾಸಿಸುತ್ತಿರುವ ರಜನಿ ಶೆಟ್ಟಿ ಪ್ರತಿ ನಿತ್ಯ 500ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಊಟ ಹಾಕುತ್ತಾರೆ. ಗಾಯಗೊಂಡ ನಾಯಿ, ಬೆಕ್ಕು, ಪಕ್ಷಿಗಳಿಗೆ ಆಶ್ರಯ ನೀಡಿ, ಅವುಗಳಿಗೆ ಚಿಕಿತ್ಸೆಯಿತ್ತು, ಗುಣವಾದ ಬಳಿಕ ಬಿಡುತ್ತಾರೆ. ನಾಯಿ ಹಾಗೂ ಬೆಕ್ಕು ಎಂದರೆ ಅತೀವ ಪ್ರೀತಿಯಿರುವ ಈಕೆ ಕಳೆದ ವರ್ಷವೂ ನಾಯಿ ಬಾವಿಗೆ ಬಿದ್ದು ರಕ್ಷಣೆಗೆ ಯಾರೂ ಮುಂದಾಗದಿದ್ದಾಗ ಸ್ವತಃ ಧೈರ್ಯ ಮಾಡಿ ಇಳಿದು ರಕ್ಷಿಸಿದ್ದರು. ಆ ವಿಡಿಯೋ ವೈರಲ್ ಆಗಿತ್ತು.