

ಎಂ.ಪಿ.ವೆಂಕಟೇಶ್ ಮದ್ದೂರು
ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ನಾಯಿಗಳ ಹಾವಳಿ ಹೆಚ್ಚಿದ್ದು, ಇದರಿಂದ ಜನರಿಗೆ ನೆಮ್ಮದಿ ಇಲ್ಲದಂತಾಗಿದೆ.
ಪಟ್ಟಣದ ಪೇಟೆ ಬೀದಿ, ಕೆಮ್ಮಣ್ಣುನಾಲೆ ಸರ್ಕಲ್, ಕೊಲ್ಲಿ ಸರ್ಕಲ್ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಹಾಗೂ ತಾಲೂಕಿನ ಬೆಸಗರಹಳ್ಳಿ, ಕೊಪ್ಪ, ಕೆಸ್ತೂರು, ಕೆ.ಹೊನ್ನಲಗೆರೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನಾಯಿಗಳ ಉಪಟಳ ಹೆಚ್ಚಿರುವುದರಿಂದ ಸಾರ್ವಜನಿಕರು ರೋಸಿಹೋಗಿದ್ದಾರೆ.
ಪಟ್ಟಣ ವ್ಯಾಪ್ತಿಯಲ್ಲಿ ವೃದ್ಧರು, ಮಹಿಳೆಯರು ಮತ್ತು ಮಕ್ಕಳು ನಾಯಿಗಳ ಹಾವಳಿಂದ ಧೈರ್ಯವಾಗಿ ರಸ್ತೆಗಳಲ್ಲಿ ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ. ದಿನಪತ್ರಿಕೆ ವಿತರಿಸುವ ಹುಡುಗರು ನಾಯಿಗಳ ಹಾವಳಿಯಿಂದ ರೋಸಿಹೋಗಿದ್ದಾರೆ. ರಾತ್ರಿ ವೇಳೆಯಲ್ಲಂತೂ ನಾಯಿಗಳ ಹಿಂಡು ಕಂಡು ರಸ್ತೆಯಲ್ಲಿ ಹೋಗುವುದೋ ಬೇಡವೋ ಎಂಬ ಗೊಂದಲ ಉಂಟಾಗುತ್ತದೆ. ರಾತ್ರಿ ವೇಳೆಯಲ್ಲಿ ನಾಯಿಗಳ ಕೂಗಾಟದಿಂದ ನೆಮ್ಮದಿಯಾಗಿ ನಿದ್ರೆ ಮಾಡಲು ಆಗುತ್ತಿಲ್ಲ, ಈಗಾಗಲೇ ನಾಯಿಗಳ ಹಿಂಡು ಸಾರ್ವಜನಿಕರು ಮತ್ತು ಮಕ್ಕಳ ಮೇಲೆ ದಾಳಿ ಮಾಡಿ ಕಚ್ಚಿದ ಉದಾಹರಣೆಗಳು ಸಾಕಷ್ಟಿವೆ.
ಇದರ ಜತೆಗೆ, ರಸ್ತೆಯಲ್ಲಿ ವಾಹನ ಸಂಚಾರ ಮಾಡುವ ಸಂದರ್ಭದಲ್ಲಿ ನಾಯಿಗಳು ಅಡ್ಡ ನುಗ್ಗಿದ ಪರಿಣಾಮ ಬೈಕ್‌ನಿಂದ ಕೆಳಗೆ ಬಿದ್ದು ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿರುವವರ ಸಂಖ್ಯೆ ಬಹಳಷ್ಟಿದೆ.
ತಾಜ್ಯ ವಸ್ತುಗಳನ್ನು ಹಾಕಿದ ಕಡೆ ನಾಯಿಗಳ ಹಿಂಡು ಅಲ್ಲಿಗೆ ಹೋಗಿ ಕಸವನ್ನು ಎಳೆದಾಡಿ, ಎಲ್ಲೆಂದರಲ್ಲಿ ತಂದು ಹಾಕುವುದರಿಂದ ಅನೈರ್ಮಲ್ಯ ಉಂಟಾಗಿ ರೋಗರುಜಿನಗಳು ಬರುವ ಸಾಧ್ಯತೆ ಇದೆ.
ಗ್ರಾಮಾಂತರ ಪ್ರದೇಶಗಳಲ್ಲಿ ನಾಯಿಗಳ ಹಿಂಡು ಆಡು ಮತ್ತು ಕುರಿಗಳ ಮೇಲೆ ದಾಳಿ ನಡೆಸಿ ತಿಂದು ಹಾಕುತ್ತಿರುವುದರಿಂದ ರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಇಲ್ಲಿಯೂ ಗ್ರಾಮಸ್ಥರು ನೆಮ್ಮದಿಯಾಗಿ ರಸ್ತೆಯಲ್ಲಿ ಹಾಗೂ ಜಮೀನುಗಳ ಕಡೆ ಹೋಗಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ.
ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡುತ್ತಿಲ್ಲವೇಕೆ?: ನಾಯಿಗಳ ಹಾವಳಿ ತಪ್ಪಿಸಲು ಸರ್ಕಾರದಿಂದ ನಿಯಾನುಸಾರ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸುವಂತೆ ಆದೇಶವಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಈ ಸಂಬಂಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಯಕ್ಷಪ್ರಶ್ನೆಯಾಗಿದೆ. ಮುಂದಾದರೂ ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. 2020ರ ಗಣತಿ ಪ್ರಕಾರ ತಾಲೂಕಿನಲ್ಲಿ 4 ಸಾವಿರ ನಾಯಿಗಳು ಇವೆ ಎಂದು ತಿಳಿದುಬಂದಿದ್ದು, ಇದೀಗ ಅವುಗಳ ಸಂಖ್ಯೆ ಮತ್ತಷ್ಟು ಜಾಸ್ತಿಯಾಗಿದೆ.
ಜಿಲ್ಲೆ ಪ್ರಥಮ: ನಾಯಿಗಳಿಂದ ಬರುವ ರೇಬಿಸ್ ರೋಗದಿಂದ ರಾಜ್ಯದಲ್ಲೇ ಅತಿ ಹೆಚ್ಚು ಸಂಖ್ಯೆಯ ಜನರು ಜಿಲ್ಲೆಯಲ್ಲಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಇದ್ದು, ಇದು ಆತಂಕಕಾರಿ ವಿಷಯವಾಗಿದೆ. ಆದ್ದರಿಂದ ನಾಯಿಗಳ ನಿಯಂತ್ರಣಕ್ಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ.
ನಾಯಿಗಳ ಕ್ರೌರ್ಯ ಕಡಿಮೆಯಾಗುತ್ತದೆ: ನಾಯಿಗಳಿಗೆ ನಿಯಾನುಸಾರ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡುವುದರಿಂದ ಸಂತಾನ ಕಡಿಮೆಯಾಗುತ್ತದೆಯಲ್ಲದೆ, ಕ್ರೌರ್ಯವೂ ಕಡಿಮೆಯಾಗುತ್ತದೆ ಎನ್ನಲಾಗಿದೆ. ತಾಲೂಕಿನ ಬೆಸಗರಹಳ್ಳಿ ಗ್ರಾಮದಲ್ಲಿ ಇತ್ತೀಚೆಗಷ್ಟೇ ನಾಯಿಗಳ ಹಿಂಡು ದಾಳಿ ಮಾಡಿ ಮಲಗಿದ್ದ ಅಪರಿಚಿತ ವ್ಯಕ್ತಿಯನ್ನು ಸಾಯಿಸಿವೆ. ಈ ಘಟನೆ ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕವನ್ನುಂಟುಮಾಡಿದೆ.