

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಅ.2ರಂದು ಮೈಸೂರು ಹಾಕಿ ಮೈದಾನದಲ್ಲಿ ಆಯೋಜಿಸಿರುವ ಮುದ್ದು ಪ್ರಾಣಿಗಳ ಪ್ರದರ್ಶನದ ವೇಳೆ ಚಾರ್ಲಿ 777 ಸಿನಿಮಾ ಖ್ಯಾತಿಯ ಶ್ವಾನ ಭಾಗವಹಿಸಲಿದೆ.
ಚಾರ್ಲಿ ಸಿನಿಮಾದ ನಿರ್ದೇಶಕರು ಮತ್ತು ನಟ ರಕ್ಷಿತ್ ಶೆಟ್ಟಿ ಆಹ್ವಾನಕ್ಕೆ ಪ್ರಯತ್ನಿಸುವುದಾಗಿ ರೈತ ದಸರಾ ಸಮಿತಿ ಕಾರ್ಯದರ್ಶಿ ಡಾ.ಷಡಕ್ಷರಿ ಮೂರ್ತಿ ತಿಳಿಸಿದರು.
ವಿವಿಧ ಜಾತಿಯ ಶ್ವಾನಗಳು, ಪಕ್ಷಿಗಳು ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ಗಣಪತಿ ಸಚ್ಚಿದಾನಂದ ಆಶ್ರಮದಿಂದ ಗಿಣಿಗಳನ್ನು ತರಲಾಗುವುದು. ಅಕ್ವೇರಿಯಂ ಮೀನುಗಳ ಪ್ರದರ್ಶನ ಇರುತ್ತದೆ. ಎಲ್ಲ ಪಶು ಆಸ್ಪತ್ರೆಗಳಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ರೈತ ದಸರಾ ಕಾರ್ಯಾಧ್ಯಕ್ಷ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ಸೆ.30ರಂದು ಬೆಳಗ್ಗೆ 9.30ಕ್ಕೆ ಎತ್ತಿನ ಬಂಡಿಯಲ್ಲಿ ಮೆರವಣಿಗೆ, 10.30ಕ್ಕೆ ಕೃಷಿ ವಸ್ತುಪ್ರದರ್ಶನ ಉದ್ಘಾಟನೆ, ರೈತರಿಗೆ ಸನ್ಮಾನ, ರೈತರೊಂದಿಗೆ ವಿಚಾರ ವಿನಿಮಯ ನಡೆಯಲಿದೆ ಎಂದು ಮಾಹಿತಿ ನೀಡಿದರು.