

ಚನ್ನಗಿರಿ: ಪಟ್ಟಣದಲ್ಲಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ರಸ್ತೆಯಲ್ಲಿ ಓಡಾಡುವುದಕ್ಕೆ ಕಷ್ಟವಾಗುತ್ತಿದೆ. ಜತೆಗೆ ಅವುಗಳಿಗೆ ಹೆದರಿ ಮನೆ ಬಾಗಿಲನ್ನು ಹಾಕಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಐದು ಕಿಮೀ ವ್ಯಾಪ್ತಿ ಹೊಂದಿರುವ ಪಟ್ಟಣದಲ್ಲಿ ಒಟ್ಟು 23 ವಾರ್ಡ್ಗಳಿದ್ದು, ಸುಮಾರು 25 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಪ್ರತಿ ವಾರ್ಡ್ಗಳಿಗೆ ಒಬ್ಬ ಸದಸ್ಯ ಜತೆಗೆ 5 ಸರ್ಕಾರದ ನಾಮ ನಿರ್ದೇಶನ ಸದಸ್ಯರಿದ್ದಾರೆ. ಸಾರ್ವಜನಿಕರು ಸದಸ್ಯರ ಬಳಿ ನಾಯಿಗಳನ್ನು ಹಿಡಿಸುವಂತೆ ಅನೇಕ ಬಾರಿ ಮೌಖಿಕವಾಗಿ ದೂರು ನೀಡಿದರೂ ಪುರಸಭೆಯವರು ಕ್ರಮ ಕೈಗೊಳ್ಳುತ್ತಿಲ್ಲ. ಪ್ರತಿ ಕೇರಿಯಲ್ಲಿ 50ಕ್ಕೂ ಹೆಚ್ಚು ನಾಯಿಗಳನ್ನು ಕಾಣಬಹುದಾಗಿದೆ.
ನಗರದ ಸಂತೆ ಮೈದಾನದ ಬಳಿ ಪುರಸಭೆಯವರು ನಿರ್ವಿುಸಿದ 30ಕ್ಕೂ ಹೆಚ್ಚು ಮಳಿಗೆಗಳನ್ನು ಕೋಳಿ ಅಂಗಡಿ ಮಾಡಲು ನೀಡಿದ್ದಾರೆ. ಆದರೆ ಅಂಗಡಿಯವರು ಸತ್ತ ಕೋಳಿ ಮತ್ತು ತ್ಯಾಜ್ಯವನ್ನು ಅಂಗಡಿ ಹಿಂದೆ ಬಿಸಾಡುವುದರಿಂದ ಅದನ್ನು ಸೇವಿಸಲು ನಾಯಿಗಳು ಸಾಲಾಗಿ ನಿಂತಿರುತ್ತವೆ.
ಎಲ್ಕೆಜಿಯಿಂದ ಪದವಿವರೆಗೆ ಶಾಲಾ ಕಾಲೇಜು ಇರುವುದರಿಂದ ಗ್ರಾಮೀಣ ಭಾಗದ 8 ಸಾವಿರಕ್ಕೂ ಹೆಚ್ಚು ಮಕ್ಕಳು ಪಟ್ಟಣಕ್ಕೆ ಪ್ರತಿನಿತ್ಯ ಬರುತ್ತಾರೆ. ಅಲ್ಲದೇ ವಿದ್ಯಾರ್ಥಿಗಳು ನಡೆದು ಶಾಲೆಗೆ ಹೋಗುವಾಗ ನಾಯಿಗಳು ಅವರ ಮೇಲೆ ಎಗರಿ ಗಾಯಗೊಳಿಸಿದ ಘಟನೆಗಳು ಸಹ ನಡೆದಿವೆ.
ಯಾವ ನಾಯಿ ಎಲ್ಲಿಂದ ಬಂದು ಮೈಮೇಲೆ ಹಾರುತ್ತದೆ ಎನ್ನುವ ಭಯದಲ್ಲಿ ಸಾರ್ವಜನಿಕರು ವಾಯುವಿಹಾರಕ್ಕೆ ಹೋಗುವಾಗ ಕಡ್ಡಾಯವಾಗಿ ಕೈಯಲ್ಲಿ ಕೋಲು ಹಿಡಿದು ಹೋಗುತ್ತಿದ್ದಾರೆ. ಪ್ರತಿದಿನ ಪಾಲಕರು ಮಕ್ಕಳನ್ನು ಶಾಲಾ- ಕಾಲೇಜಿಗೆ ಕಳುಹಿಸಿಕೊಟ್ಟು ಕರೆದುಕೊಂಡು ಬರುವ ಅನಿವಾರ್ಯತೆ ಇದೆ. ಹಗಲಿನಲ್ಲಿ ಯಾರ ಮನೆ ಒಳಗೆ ನಾಯಿ ಬರುತ್ತದೆ ಎಂದು ತಿಳಿಯದೇ ಬಾಗಿಲನ್ನು ಹಾಕಿಕೊಂಡು ಇರುತ್ತಾರೆ. ಅಲ್ಲದೇ ರಜಾದಿನಗಳಲ್ಲಿ ಮಕ್ಕಳು ಮನೆ ಮುಂದೆ ಆಟವಾಡುವುದು ಕಷ್ಟವಾಗಿದೆ.
ಶ್ವಾನಗಳ ಸಂಖ್ಯೆ ಅಧಿಕವಾಗುತ್ತಿದ್ದಂತೆ ಅವುಗಳನ್ನು ಹಿಡಿಸಿ ಅರಣ್ಯ ಪ್ರದೇಶದ ಒಳಗೆ ಬಿಟ್ಟು ಬರಲಾಗುತ್ತದೆ. ನಾಯಿಗಳನ್ನು ಸಾಯಿಸುವಂತೆ ಇಲ್ಲ. ಪುರಸಭೆ ಸದಸ್ಯರು ನಾಯಿಗಳನ್ನು ಹಿಡಿಸುವಂತೆ ತಿಳಿಸಿದ್ದಾರೆ. ಈಗಾಗಲೇ ಪುರಸಭೆ, ಪಶು ಸಂಗೋಪನಾ ಆಸ್ಪತ್ರೆ ಮತ್ತು ಎನ್ಜಿಒ ಗಳ ಸಮಿತಿಯನ್ನು ರಚನೆ ಮಾಡಿ ಹಿಡಿಸುವ ಕಾರ್ಯ ಪ್ರಾರಂಭ ಮಾಡಲಾಗುತ್ತದೆ. | ಕೃಷ್ಣ ಡಿ. ಕಟ್ಟಿಮನಿ, ಪುರಸಭೆ ಮುಖ್ಯಾಧಿಕಾರಿ.
ವಾರ್ಡ್ ಜನರು ಮೌಖಿಕವಾಗಿ ದೂರನ್ನು ನೀಡಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಸದ್ಯದಲ್ಲೇ ನಾಯಿಗಳನ್ನು ಹಿಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ. | ಪಟ್ಲಿ ನಾಗರಾಜ್, ಪುರಸಭೆ ಸದಸ್ಯ ಮನೆ ಮುಂದೆ ನಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಕಾರಣ ಪ್ರಾರಂಭದಲ್ಲಿ ಓಡಿಸುವ ಪ್ರಯತ್ನ ಮಾಡಲಾಯಿತು. ನಂತರದ ದಿನಗಳಲ್ಲಿ ಅವುಗಳಿಗೆ ಹೆದರಿ ಬಾಗಿಲನ್ನು ಹಾಕಿಕೊಂಡು ಇರುತ್ತಿದ್ದೇವೆ. | 7ನೇ ವಾರ್ಡ್ ಮನೆ ಮಾಲೀಕ.