ನಿತ್ಯ 33 ಜನರಿಗೆ ನಾಯಿ ಕಡಿತ

dog jan 30 2020
Published on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ರಾತ್ರಿಯಾದರೆ ಕಳ್ಳ-ಕಾಕರ ಭಯ ಒಂದೆಡೆಯಾದರೆ ಬೀದಿನಾಯಿಗಳ ಕಾಟ ಮತ್ತೊಂದೆಡೆ. ಹಿಂಡು ಹಿಂಡಾಗಿ ಸುತ್ತಾಡುವ ಶ್ವಾನಗಳ ದಂಡು ವಾಹನಗಳಲ್ಲಿ ಹೋಗುವ ಸವಾರರನ್ನು ಬೆನ್ನಟ್ಟುತ್ತವೆ. ಇನ್ನು ನಡೆದು ಹೋಗುತ್ತಿರುವವರ ಪಾಡು ಆ ದೇವರಿಗೇ ಪ್ರೀತಿ!

12,753 ಜನರಿಗೆ ಕಡಿತ: ಆರೋಗ್ಯ ಇಲಾಖೆ ವರದಿ ಪ್ರಕಾರ 2018ರಿಂದ 2019ರ ಡಿಸೆಂಬರ್​ವರೆಗೆ ಬೆಂಗಳೂರು ನಗರದಲ್ಲಿ 12,753 ಜನರಿಗೆ ಹಾಗೂ ಗ್ರಾಮಾಂತರ ಭಾಗದಲ್ಲಿ 7,942 ಜನರಿಗೆ ಬೀದಿನಾಯಿಗಳು ಕಚ್ಚಿವೆ. ಪ್ರತಿತಿಂಗಳು ಸರಾಸರಿ 1 ಸಾವಿರಕ್ಕೂ ಹೆಚ್ಚು ಜನರು ನಾಯಿ ಕಡಿತಕ್ಕೆ ಒಳಗಾಗುತ್ತಿದ್ದಾರೆ. ಬೀದಿನಾಯಿಗಳ ಹಾವಳಿ ನಿಯಂತ್ರಿಸುವಲ್ಲಿ ಬಿಬಿಎಂಪಿ ಸಂಪೂರ್ಣವಾಗಿ ವಿಫಲವಾಗಿರುವುದು ಈ ಅಂಕಿ-ಅಂಶಗಳಿಂದ ಸ್ಪಷ್ಟವಾಗುತ್ತದೆ.

ಎಲ್ಲೆಲ್ಲಿ ಹಾವಳಿ ಹೆಚ್ಚು?: ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ಬೀದಿನಾಯಿ ಹಾವಳಿ ಇದೆ. ಅದರಲ್ಲೂ ಬೊಮ್ಮನಹಳ್ಳಿ, ಮಹದೇವಪುರ, ದಾಸರಹಳ್ಳಿ ವಲಯ, ಉತ್ತರಹಳ್ಳಿ, ಕೆಂಗೇರಿ, ಮಲ್ಲೇಶ್ವರ, ಬಿಟಿಎಂ ಲೇಔಟ್, ವಿಲ್ಸನ್​ಗಾರ್ಡನ್, ಚಾಮರಾಜಪೇಟೆ ಮತ್ತು ಬೆಂಗಳೂರು ಹೊರವಲಯದ ಯಲಹಂಕ, ಕೆ.ಆರ್. ಪುರ, ವೈಟ್​ಫೀಲ್ಡ್ ಭಾಗದಲ್ಲಿ ನಾಯಿಗಳ ಹಾವಳಿ ಹೆಚ್ಚಿದೆ.

ಕಾರಣವೇನು?: ಮಾಂಸ ಮಾರಾಟ ಅಂಗಡಿಗಳು, ಬಾರ್ ಮತ್ತು ರೆಸ್ಟೋರೆಂಟ್​ಗಳು, ಮಾಂಸಾಹಾರಿ ಹೋಟೆಲ್​ಗಳಿರುವ ಜಾಗದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಮಾಂಸ ತ್ಯಾಜ್ಯವನ್ನು ರಸ್ತೆಬದಿಯಲ್ಲಿ ವಿಲೇವಾರಿ ಮಾಡುವುದರಿಂದ, ಅದನ್ನು ತಿನ್ನಲು ಅವು ಬರುತ್ತವೆ. ಮಾಂಸ ಸಿಗದಿದ್ದಾಗ ಜನರ ಮೇಲೆ ಎರಗುತ್ತವೆ. ಜತೆಗೆ ಕಸ ವಿಂಗಡಣೆ ಮತ್ತು ವಿಲೇವಾರಿ ಸ್ಥಳಗಳಲ್ಲೂ ಶ್ವಾನಗಳ ಹಾವಳಿ ಮಿತಿಮೀರಿದೆ.

ಸಂತತಿ ಹೆಚ್ಚುತ್ತದೆ: ಶ್ವಾನಗಳ ಆಯಸ್ಸು 15ರಿಂದ 20 ವರ್ಷ. ಹುಟ್ಟಿದ 6 ತಿಂಗಳ ನಂತರ ನಾಯಿಗಳ ದೇಹದಲ್ಲಿನ ಹಾಮೋನ್​ಗಳಲ್ಲಿ ಬದಲಾವಣೆಯಾಗಿ ಸಂತಾನೋತ್ಪತ್ತಿ ಸಾಮರ್ಥ್ಯ ಪಡೆದುಕೊಳ್ಳುತ್ತವೆ. ಈ ಸಮಯದಲ್ಲಿ ಸಂತಾನಶಕ್ತಿ ಹರಣ ಮಾಡಬೇಕು. ಇಲ್ಲವಾದರೆ ನಾಯಿಗಳ ಸಂತತಿ ಹೆಚ್ಚುತ್ತದೆ.

ಶ್ವಾನ ಸಂತಾನ ಹೆಚ್ಚಳ ತಡೆಯದ ಬಿಬಿಎಂಪಿ

ಬೆಂಗಳೂರು ವ್ಯಾಪ್ತಿಯ ಬೀದಿನಾಯಿಗಳ ಸಂತಾನಶಕ್ತಿ ಹರಣಕ್ಕೆ ಬಿಬಿಎಂಪಿ ಪ್ರತಿವರ್ಷ 24 ಕೋಟಿ ರೂ. ಖರ್ಚು ಮಾಡುತ್ತಿದೆ. ಈ ಕಾರ್ಯಕ್ಕಾಗಿ ಪ್ರತಿ ವಲಯಕ್ಕೆ 3 ಕೋಟಿ ರೂ. ಮೀಸಲಿಡಲಾಗುತ್ತಿದೆ. ಆದರೆ, ನಾಯಿಗಳ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ. ಬೀದಿನಾಯಿಗಳನ್ನು ಹಿಡಿದು ಎಬಿಸಿ ಚಿಕಿತ್ಸೆ ಮೂಲಕ ಸಂತಾನಶಕ್ತಿ ಹರಣ ಮಾಡಿ ಮತ್ತೆ ಅದೇ ಸ್ಥಳದಲ್ಲಿ ತಂದು ಬಿಡಬೇಕೆಂಬ ಸುಪ್ರೀಂಕೋರ್ಟ್ ಆದೇಶವಿದೆ. ಆದರೆ, ಪಾಲಿಸುವಲ್ಲಿ ಬಿಬಿಎಂಪಿ ಹಿಂದೆ ಬಿದ್ದಿದೆ.

ಪೊಲೀಸರಿಗೂ ನಾಯಿ ಭಯ

ಸಾರ್ವಜನಿಕರಿಗೆ ಮಾತ್ರವಲ್ಲ ರಾತ್ರಿ ಗಸ್ತಿಗೆ ಬರುವ ಪೊಲೀಸರಿಗೂ ನಾಯಿಗಳ ಕಾಟ ತಪ್ಪಿಲ್ಲ. ಇವರ ಬೂಟಿನ ಸದ್ದು ಕೇಳುತ್ತಲೇ ಅವರ ಮೇಲೆ ದಾಳಿ ಮಾಡುತ್ತವೆ. ಚೀತಾ ಬೈಕ್​ನ ಶಬ್ದ ಹಾಗೂ ವಾಕಿಟಾಕಿ ಶಬ್ದ ಕೇಳಿಸಿದರೂ ನಮ್ಮ ಮೇಲೆ ಎರಗುತ್ತವೆ. ಕೈಯಲ್ಲಿ ಲಾಠಿ ಇದ್ದರೆ ಬಚಾವ್, ಇಲ್ಲವಾದರೆ ನಾಯಿಗಳ ಕಡಿತಕ್ಕೆ ಒಳಗಾಗುವುದು ಅನಿವಾರ್ಯ ಎಂಬುದು ಪೊಲೀಸರ ಅನುಭವದ ಮಾತು.

ಗುತ್ತಿಗೆ ಸಂಸ್ಥೆಗಳ ಕಾರ್ಯನಿರ್ವಹಣೆ ಬಗ್ಗೆ ಸಾರ್ವಜನಿಕರ ಅಸಮಾಧಾನ

ನಗರದಲ್ಲಿ ಹೆಚ್ಚುತ್ತಿರುವ ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲು ಗುತ್ತಿಗೆ ಪಡೆದಿರುವ ಸರ್ಕಾರೇತರ ಸಂಸ್ಥೆಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಆರೋಪವಿದೆ. ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ ನಡೆಸಿದ್ದೇವೆ ಎಂದು ತಪ್ಪು ಲೆಕ್ಕ ಕೊಟ್ಟು ಹಣ ಲೂಟಿ ಹೊಡೆಯುತ್ತಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಬಿಬಿಎಂಪಿ ನಿಗಾ ವಹಿಸಬೇಕಿದೆ. ತಪ್ಪಿತಸ್ಥ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನಾಯಿಗಳನ್ನು ಹಿಡಿಯಲು ಹೋದಾಗ ಅವು ಸಿಗುವುದಿಲ್ಲ. ಸಾರ್ವಜನಿಕರು ಬೀದಿಯಲ್ಲಿ ನಾಯಿಗಳು ಕಾಣಿಸಿಕೊಂಡಾಗ ಬಿಬಿಎಂಪಿಗೆ ಕರೆ ಮಾಡಿ ತಿಳಿಸಿದರೆ ಅವುಗಳನ್ನು ತಂದು ಸಂತಾನಶಕ್ತಿ ಹರಣ ಮಾಡಿ ಬಿಡಲಾಗುತ್ತದೆ. | ಮಲ್ಲಪ್ಪ ಭಜಂತ್ರಿ ಜಂಟಿ ನಿರ್ದೇಶಕ (ಪಶುಪಾಲನಾ)

ವಿಜಯ್ ಮಡಿವಾಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net