ಜಿಲ್ಲೆಯಲ್ಲಿ ನಾಯಿಕಡಿತದ ಆತಂಕ

dog
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ 4,408 ನಾಯಿ ಕಡಿತ ಪ್ರಕರಣಗಳು ವರದಿಯಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಅದೃಷ್ಟವಶಾತ್ ಎಲ್ಲಿಯೂ ರೇಬಿಸ್ ಪ್ರಕರಣ ವರದಿಯಾಗದಿರುವುದು ತುಸು ನಿರಾಳತೆ ಮೂಡಿಸಿದೆ.

ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳು ರಾಜಧಾನಿ ಬೆಂಗಳೂರಿನ ಗಡಿ ಹಂಚಿಕೊಂಡಿವೆ, ಬೆಂಗಳೂರು ನಗರದಲ್ಲಿ 8,878 ಪ್ರಕರಣಗಳು ದಾಖಲಾಗಿದ್ದರೇ ಅದರ ಶೇ.50 ಪ್ರಕರಣಗಳು ಗ್ರಾಮಾಂತರ ಜಿಲ್ಲೆಯಲ್ಲಿಯೇ ದಾಖಲಾಗಿರುವುದು ಗಮನಾರ್ಹವಾಗಿದೆ.

ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಹೆಚ್ಚು ನಾಯಿ ಕಡಿತ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. ಮುಖ್ಯವಾಗಿ ಕೋಳಿ, ಮಾಂಸ ಮಾರಾಟದ ಅಂಗಡಿಗಳ ವ್ಯಾಪ್ತಿಯಲ್ಲಿ ಹಾಗೂ ಕಸದ ಬ್ಲ್ಯಾಕ್‌ಸ್ಪಾಟ್‌ಗಳ ಬಳಿ ಹೆಚ್ಚು ನಾಯಿ ಕಡಿತದ ಪ್ರಕರಣಗಳು ದಾಖಲಾಗಿರುವುದು ಗಮನಾರ್ಹವಾಗಿದೆ. ಜಿಲ್ಲೆಯಲ್ಲಿ ಬೀದಿ ನಾಯಿಗಳಿಗೆ ಸಂತಾನಶಕ್ತಿಹರಣ ಚಿಕಿತ್ಸೆ ನಡೆಯುತ್ತಿದ್ದರೂ ನಾಯಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಆದೇ ರೀತಿ ವ್ಯಾಘ್ರವಾಗಿ ವರ್ತಿಸುವ ನಾಯಿಗಳು ಮನುಷ್ಯರ ಮೇಲೆ ದಾಳಿ ನಡೆಸುವ ಪ್ರಕರಣಗಳು ಹೆಚ್ಚುತ್ತಿವೆ ಎಂಬುದಕ್ಕೆ ಈ ಅಂಕಿಅಂಶ ಸಾಕ್ಷಿಯಾಗಿದೆ.

ಸಂತಾನಹರಣ ಗಂಭೀರವಾಗಿಲ್ಲ: ನಗರ ಸಭೆ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಆಗಾಗ ಆಂದೋಲನದ ಮಾದರಿಯಲ್ಲಿ ಬೀದಿನಾಯಿಗಳಿಗೆ ಸಂತಾನಶಕ್ತಿಹರಣ ಶಸಚಿಕಿತ್ಸಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತದೆ ಆದರೆ ಈ ಕಾರ್ಯಕ್ರಮವನ್ನು ಆಸಕ್ತಿಯಿಂದ ಮಾಡುತ್ತಿಲ್ಲ ಎಂಬ ಆರೋಪವಿದೆ. ಜತೆಗೆ ನಾಯಿಗಳ ಸಂತಾನಹರಣ ಶಸಚಿಕಿತ್ಸೆಗೆ ಸಾಕಷ್ಟು ನಿಯಮಗಳನ್ನು ಪಾಲನೆ ಮಾಡಬೇಕಿರುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಗಣಮಿಸಿದೆ. ಚಿಕಿತ್ಸೆ ಬಳಿಕ ಎಲ್ಲಿ ನಾಯಿಗಳನ್ನು ಹಿಡಿಯಲಾಗಿರುತ್ತದೋ ಅದೇ ಸ್ಥಳಕ್ಕೆ ವಾಪಸ್ ಕಳಿಸಬೇಕು ಎಂಬ ನಿಯಮ ಇದರಲ್ಲಿ ಮುಖ್ಯವಾಗಿದೆ. ಇದರ ಜತೆಗೆ ಅನುದಾನ ಕೊರತೆ ಎಂಬ ಸಿದ್ದ ಉತ್ತರ ಕೇಳಿಬರುವುದರಿಂದ ನಾಯಿಗಳ ಸಂತತಿಗೆ ಕಡಿವಾಣ ಬೀಳುತ್ತಿಲ್ಲ. ಇನ್ನು ಪಂಚಾಯಿತಿ ವ್ಯಾಪ್ತಿಗಳಲ್ಲಿ ನಾಯಿಗಳ ಸಂತಾನಶಕ್ತಿಹರಣ ಶಸಚಿಕಿತ್ಸೆ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಬೀದಿನಾಯಿಗಳ ಸಂಖ್ಯೆ ಹೆಚ್ಚಲು ಕಾರಣವಾಗಿದೆ ಎನ್ನಲಾಗಿದೆ.

 ರೇಬಿಸ್ ಪ್ರಕರಣ ವರದಿಯಾಗಿಲ್ಲ: ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಹೆಚ್ಚಿದ್ದರೂ ಕಳೆದ ಆರೇಳು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಎಲ್ಲಿಯೂ ರೇಬಿಸ್ ಪ್ರಕರಣ ಪತ್ತೆಯಾಗಿಲ್ಲ. ರೇಬಿಸ್ ಲಸಿಕೆ ಎನ್ನುವುದು ರೇಬಿಸ್ ಸೋಂಕನ್ನು ತಡೆಗಟ್ಟಲು ಬಳಸುವ ಒಂದು ಲಸಿಕೆಯಾಗಿದೆ. ರೇಬಿಸ್ ಸಾಮಾನ್ಯವಾಗಿ ಪ್ರಾಣಿಗಳಿಂದ ಹರಡುವ ಕಾಯಿಲೆಯಾಗಿದ್ದು, ಪ್ರಾಣಿಗಳು ಕಚ್ಚಿದರೆ ಮನುಷ್ಯರಿಗೆ ರೇಬಿಸ್ ಬರಬಹುದು. ರೇಬಿಸ್ ಲಸಿಕೆ ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಯಾವುದೇ ಬೀದಿ ನಾಯಿ ಕಡಿತ ಪ್ರಕರಣ ಕಂಡುಬಂದರೂ ತಕ್ಷಣ ವ್ಯಕ್ತಿಗಳು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ತಪಾಸಣೆಗೊಳಪಡಬೇಕು ಎಂದು ಆರೋಗ್ಯಾಧಿಕಾರಿಗಳು ಮನವಿ ಮಾಡಿದ್ದಾರೆ. ನಾಯಿ ಕಡಿತದಿಂದ ಉಂಟಾಗುವ ಪ್ರತಿ ಸಾವಿನ ಬಗ್ಗೆಯೂ ಅಧಿಕಾರಿಗಳು ಪರಿಶೋಧಿಸಬೇಕೆಂದು ಆದೇಶವಿದೆ. ಇದರಲ್ಲಿ ರೋಗಿಯು ಚಿಕಿತ್ಸೆ ಪಡೆಯಲು ವಿಳಂಬ ವಾಡಿದ್ದಾರೆಯೇ, ಆರೈಕೆಯಲ್ಲಿ ಅಂತರಗಳಿವೆಯೇ ಮತ್ತು ಸೋಂಕಿತ ನಾಯಿಯನ್ನು ಗುರುತಿಸಿ ವ್ಯವಹರಿಸಲಾಗಿದೆಯೇ ಸೇರಿ ಹಲವು ವಿಚಾರಗಳು ಒಳಗೊಳ್ಳುತ್ತದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಪ್ರಸ್ತುತ ಎಲ್ಲಿಯೂ ರೇಬಿಸ್ ಪ್ರಕರಣ ಪತ್ತೆಯಾಗದಿರುವುದು ಸಮಾಧಾನಕರ ವಿಷಯವಾಗಿದೆ. ನಾಯಿ ಕಡಿತ ಪ್ರಕರಗಳಲ್ಲಿ ಚಿಕಿತ್ಸೆಗೆ ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಜತೆಗೆ ರೇಬಿಸ್ ಲಸಿಕೆಯೂ ಲಭ್ಯವಿದೆ. ಎಲ್ಲಿಯಾದರೂ ನಾಯಿ ಕಡಿತ ಪ್ರಕರಣ ಕಂಡುಬಂದರೆ ತಕ್ಷಣ ಆಸ್ಪತ್ರೆಗೆ ಹೋಗಿ ವೈದ್ಯರಿಂದ ತಪಾಸಣೆಗೊಳಪಡಬೇಕು. ಈ ಬಗ್ಗೆ ನಿರ್ಲಕ್ಷ್ಯ ಮಾಡಬಾರದು.

ಕೃಷ್ಣಾರೆಡ್ಡಿ, ಜಿಲ್ಲಾ ಆರೋಗ್ಯಾಧಿಕಾರಿ

---

ನಗರದಲ್ಲಿ ಬೀದಿನಾಯಿಗಳ ಸಂತತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಶಸಚಿಕಿತ್ಸಾ ಆಂದೋಲನಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಆದರೂ ಬೆಂಗಳೂರು, ಕೋಲಾರ ಸೇರಿ ನೆರೆ ಜಿಲ್ಲೆಗಳಿಂದ ನಾಯಿಗಳನ್ನು ತಂದು ಬಿಟ್ಟುಹೋಗುವವರ ಸಂಖ್ಯೆಯೂ ಹೆಚ್ಚಿದೆ. ಇನ್ನು ನಗರ ವ್ಯಾಪ್ತಿಯಲ್ಲಿ ಕಸದ ಬ್ಲ್ಯಾಕ್‌ಸ್ಟಾಟ್‌ಗಳಿಗೆ ಕಡಿವಾಣ ಹಾಕಲು ಸಿಬ್ಬಂದಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಸಾರ್ವಜನಿರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ನೀಲಲೋಚನಪ್ರಭು, ನಗರಸಭೆ ಆಯುಕ್ತ ಹೊಸಕೋಟೆ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net