

ಕೆ.ಆರ್.ಸಾಗರ: ಕೃಷ್ಣರಾಜಸಾಗರದ ವಿಶ್ವವಿಖ್ಯಾತ ಬೃಂದಾವನದಲ್ಲಿ ಹುಚ್ಚುನಾಯಿ ದಾಳಿಗೆ ಐವರು ಪ್ರವಾಸಿಗರು ಗಾಯಗೊಂಡಿದ್ದಾರೆ.
ರಾಮನಗರದ ಅನಿಲ್ ಮತ್ತು ಬೆಂಗಳೂರು ಮೂಲದ ನಾಲ್ವರು ಪ್ರವಾಸಿಗರು ನಾಯಿ ದಾಳಿಗೆ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಮೈಸೂರು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಉತ್ತರ ಬೃಂದಾವನದಲ್ಲಿರುವ ದೊಡ್ಡ ಕಾರಂಜಿಯ ಬಳಿ ನಡೆದು ಹೋಗುತ್ತಿದ್ದ ಪ್ರವಾಸಿಗರ ಮೇಲೆ ಹುಚ್ಚು ನಾಯಿ ದಾಳಿ ನಡೆಸಿದೆ.
ಆಕ್ರೋಶ: ಘಟನೆಯಿಂದ ಆಕ್ರೋಶಗೊಂಡ ಪ್ರವಾಸಿಗರು, ಟೆಕೆಟ್ ನೀಡುವ ಕೆಸಿಐಸಿ ಸಿಬ್ಬಂದಿ ಬಳಿ ವಾಗ್ವಾದ ನಡೆಸಿ ಪ್ರವೇಶ ಶುಲ್ಕ ವಾಪಸ್ ನೀಡಿ ಚಿಕಿತ್ಸೆ ವೆಚ್ಚ ಭರಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ಕೆಸಿಐಸಿ ಸಿಬ್ಬಂದಿ ಬೇಜವಾಬ್ದಾರಿ ಉತ್ತರ ನೀಡಿದ ಹಿನ್ನೆಲೆಯಲ್ಲಿ ಪ್ರವಾಸಿಗರು ಕೆಲ ಸಮಯ ಪ್ರತಿಭಟನೆ ನಡೆಸಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಣೆಕಟ್ಟು ಭದ್ರತಾ ಪಡೆಯ ಉಸ್ತುವಾರಿ ಅಧಿಕಾರಿ ಶಶಿಕಲಾ, ಪ್ರವಾಸಿಗರ ಮನವೊಲಿಸಿ ಪ್ರವೇಶ ನಿರ್ಬಂಧಿಸಿದರು.
ಇಂತಹ ಘಟನೆ ಯಾವಾಗಲೂ ನಡೆದಿಲ್ಲ. ನಾಯಿ ಸೆರೆ ಹಿಡಿಯಲು ಸಂಬಂಧಪಟ್ಟವರಿಗೆ ಸೂಚಿಸಿದ್ದೇವೆ. ದಯವಿಟ್ಟು ಸಹಕರಿಸಿ ಎಂದು ಕಾವೇರಿ ನೀರಾವರಿ ನಿಗಮದ ಸಹಾಯಕ ಇಂಜಿನಿಯರ್ ವೇಣುಗೋಪಾಲ ಪ್ರವಾಸಿಗರಲ್ಲಿ ಮನವಿ ಮಾಡಿದರು.