

ಮಡಿಕೇರಿ:
ಕೊಡಗಿನಲ್ಲಿ ಬೀದಿ ನಾಯಿಗಳ ಹಾವಳಿ ದಿನದದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಗರ ಪ್ರದೇಶಗಳಲ್ಲಂತೂ ಕೆಲವು ಭಾಗಗಳಲ್ಲಿ ತಿರುಗಾಡಲು ಕೂಡ ಭಯ ಪಡಬೇಕಾದ ಸ್ಥಿತಿ ಇದೆ. ನಿಯಂತ್ರಣ ಹೇರಬೇಕಿರುವ ಸ್ಥಳೀಯಾಡಳಿತಗಳು ಪ್ರಾಣಿ ದಯಾ ಸಂಘಟನೆಗಳ ಕಡೆ ಕೈ ತೋರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಆರೋಪ ಎದುರಿಸುತ್ತಿದೆ. ಕಳೆದ ಒಂದು ವರ್ಷದಲ್ಲೇ ಜಿಲ್ಲೆಯಲ್ಲಿ 4 ಸಾವಿರ ನಾಯಿ ಕಡಿತ ಪ್ರಕರಣಗಳು ದಾಖಲಾಗಿರುವುದು ಪರಿಸ್ಥಿತಿಯ ಗಂಭೀರತೆಗೆ ಹಿಡಿದ ಕೈ ಗನ್ನಡಿಯಾಗಿದೆ.
ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಕೊಡಗಿನ ಪ್ರಮುಖ ಪಟ್ಟಣಗಳಲ್ಲಿ ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗಿದೆ. ಪ್ರಾಣಿ ಪ್ರಿಯರ ವಿರೋಧ ಮತ್ತು ಕಾನೂನಿನ ಕೆಲವೊಂದು ಕಟ್ಟುಪಾಡುಗಳಿಂದಾಗಿ ಬೀದಿ ನಾಯಿಗಳ ನಿಯಂತ್ರಣ ಕಾರ್ಯ ಪರಿಣಾಮಕಾರಿಯಾಗಿ ಆಗುತ್ತಿಲ್ಲ ಎನ್ನುವ ಆರೋಪಗಳಿವೆ. ಅಲ್ಲಲ್ಲಿ ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಶಸ್ತç ಚಿಕಿತ್ಸೆಗಳನ್ನು ಮಾಡಿದ್ದರೂ ನಾಯಿಗಳ ಸಂಖ್ಯೆಯಲ್ಲಿ ಇಳಿಕೆ ಮಾತ್ರ ಆಗುತ್ತಿಲ್ಲ. ಮನೆಯಲ್ಲಿ ಸಾಕಿದ ನಾಯಿಗಳಿಗೆ ಹೆಣ್ಣು ಮರಿಗಳು ಹುಟ್ಟಿದರೆ ಅವುಗಳನ್ನೂ ಬಹುತೇಕರು ಬೀದಿ ಪಾಲು ಮಾಡುವುದರಿಂದ ಕೂಡ ಬೀದಿ ನಾಯಿಗಳ ಸಂಖ್ಯೆ ಜಾಸ್ತಿ ಆಗಿದೆ.
ಜಿಲ್ಲೆಯ ಕೆಲವೊಂದು ಪ್ರದೇಶಗಳಲ್ಲಿ ನಾಯಿಗಳ ಹಾವಳಿಯಿಂದಾಗಿ ಜನಸಾಮಾನ್ಯರು ಮುಕ್ತವಾಗಿ ಸಂಚರಿಸಲು ಸಾಧ್ಯವಾಗದ ಸ್ಥಿತಿ ಇದೆ. ಹಲವು ವರ್ಷಗಳ ನಂತರ ಇದೇ ಮೊದಲ ಬಾರಿಗೆ ನಾಯಿಗಳ ಸಂಖ್ಯೆ ಈ ಪ್ರಮಾಣದಲ್ಲಿ ಹೆಚ್ಚಾಗಿದೆ ಎನ್ನುತ್ತಾರೆ ಸಾರ್ವಜನಿಕರು. ಬೀದಿ ನಾಯಿಗಳ ಕಡಿತ, ಬೀದಿ ನಾಯಿಗಳು ಅಟ್ಟಿಸಿಕೊಂಡು ಬರುವುದು, ದ್ವಿಚಕ್ರ ವಾಹನಗಳಿಗೆ ಅಡ್ಡ ಬಂದು ಅಪಘಾತಗಳು ಸಂಭವಿಸಿಸುವುದು ಈಚೆಗೆ ಸಾಮಾನ್ಯ ಎಂಬAತಾಗಿದೆ. ನಾಯಿಗಳಿಗೆ ಸಂಬAಧಿಸಿದAತೆ ದಿನಕ್ಕೆ ಕನಿಷ್ಠ ಒಂದಾದರೂ ಅನಾಹುತ ಜಿಲ್ಲೆಯ ಎಲ್ಲಿಯಾದರೂ ವರದಿ ಆಗುತ್ತಲೇ ಇರುತ್ತದೆ.
ಬೀದಿ ನಾಯಿಗಳ ನಿಯಂತ್ರಣಕ್ಕೆ ಸ್ಥಳೀಯ ಆಡಳಿತಗಳಿಗೆ ಸಾಕಷ್ಟು ಸಲ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ ಎನ್ನುವುದು ಸಾರ್ವಜನಿಕರ ಅಳಲು. ಪ್ರತಿ ಬಾರಿಯೂ ಮಡಿಕೇರಿ ನಗರಸಭೆ ಸಾಮಾನ್ಯ ಸಭೆ ನಡೆಯುವಾಗ ಬೀದಿ ನಾಯಿಗಳ ಹಾವಳಿ ನಿಯಂತ್ರಣದ ಬಗ್ಗೆ ಚರ್ಚೆ ಆಗದಿದ್ದರೆ ಆ ಸಭೆಯನ್ನು ಅಪೂರ್ಣ ಎಂದೇ ಪರಿಗಣಿಸುವ ಸ್ಥಿತಿ ಬಂದಿದೆ. ನಗರಸಭೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರೂ ವಾಕಿಂಗ್ ಸಂದರ್ಭ ನಾಯಿಗಳ ಹಾವಳಿಯಿಂದ ತಮಗಾದ ಸಮಸ್ಯೆ ಹೇಳಿಕೊಂಡಿದ್ದರು.
ಮತ್ತೊಂದು ಕಡೆ ಆರೋಗ್ಯ ಇಲಾಖೆ ರೇಬೀಸ್ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿರುವುದರಿAದ ನಾಯಿಗಳ ಹಾವಳಿ ಹೆಚ್ಚಿದ್ದರೂ ಅದರ ದುಷ್ಪರಿಣಾಮದ ಬಿಸಿ ಇನ್ನೂ ತಲುಪಬೇಕಾದವರಿಗೆ ತಲುಪಿಲ್ಲ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಜನವರಿಯಿಂದ ನವೆಂಬರ್ ಅಂತ್ಯದವರೆಗೆ ನಾಯಿ ಕಡಿತದ 4,015 ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯ ಆಸ್ಪತ್ರೆಗಳಲ್ಲಿ ಸಕಾಲದಲ್ಲಿ ಚಿಕಿತ್ಸೆ ಲಭ್ಯವಾದ ಕಾರಣ ಸಾವು ಅಥವಾ ಇತರ ದುರ್ಘಟನೆಗಳು ಸಂಭವಿಸಿಲ್ಲ.
ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳದ ಸ್ಥಳೀಯ ಆಡಳಿತಗಳು ಪ್ರಾಣಿ ದಯಾ ಸಂಘ ಸೇರಿದಂತೆ ಇತರ ಸಂಘಟನೆಗಳ ಕಡೆಗೆ ಬೆರಳು ತೋರಿಸುವಂಥ ಪರಿಸ್ಥಿತಿ ನಿರ್ಮಾಣ ಆಗಿದೆ. ಬೀದಿ ನಾಯಿಯನ್ನು ಮುಟ್ಟಲು ಕೂಡ ಭಯಪಡಬೇಕಾದ ವಾತಾವರಣವನ್ನು ಪ್ರಾಣಿಪ್ರಿಯರು ನಿರ್ಮಾಣ ಮಾಡಿದ್ದಾರೆ ಎನ್ನುತ್ತಾರೆ ಸ್ಥಳೀಯ ಆಡಳಿತವೊಂದರ ಹೆಸರು ಹೇಳಲು ಇಚ್ಛಿಸದ ಅಧಿಕಾರಿ. ಹಾಗಾಗಿ ಬಿದಿ ನಾಯಿಳ ಹಾವಳಿ ನಿಯಂತ್ರಣಕ್ಕೆ ಎಲ್ಲಿಯೂ ಗಂಭೀರ ಚಿಂತನೆ ನಡೆಯುತ್ತಿಲ್ಲ.
ನಾಯಿಗಳ ಹಾವಳಿ ನಿಯಂತ್ರಣಕ್ಕೆ ಬೇರೆ ಬೇರೆ ದಾರಿಗಳಿದ್ದರೂ ಅಧಿಕಾರಿಗಳಲ್ಲಿ ಇಚ್ಛಾಶಕ್ತಿಯ ಕೊರತೆ ಕಾಡುತ್ತಿದೆ ಎನ್ನುವ ಆರೋಪಗಳಿವೆ. ಕಾಯಿಲೆ ಪೀಡಿತ ನಾಯಿಗಳನ್ನು ಕೊಲ್ಲುವುದು, ಹೆಚ್ಚು ಅಪಾಯಕಾರಿ ಬೀದಿ ನಾಯಿಗಳನ್ನು ಬೇರೆ ಕಡೆಗೆ ಸ್ಥಳಾಂತರಿಸುವುದು, ಸಂತಾನ ಶಕ್ತಿ ಹರಣ ಸಸ್ತç ಚಿಕಿತ್ಸೆ ಮಾಡುವುದು, ಬೀದಿ ನಾಯಿಗಳನ್ನು ಒಂದಡೆ ಕೂಡಿಹಾಕಿ ಸಲಹುವುದು.. ಹೀಗೆ ಬೇರೆ ಬೇರೆ ಸಲಹೆಗಳು ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ. ಇದನ್ನು ಜಾರಿ ಮಾಡಲು ಅಧಿಕಾರಿಗಳು ಮನಸ್ಸು ಮಾಡಬೇಕಿರುವುದು ಮುಖ್ಯವಾಗಿದೆ ಎನ್ನುವುದು ಜನಸಾಮಾನ್ಯರ ಅಭಿಪ್ರಾಯ.
ಇನ್ನೊಂದೆಡೆ ಸ್ಥಳೀಯ ಆಡಳಿತಗಳು ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಮುಂದಾದರೂ ಅದನ್ನು ಜಾರಿಗೊಳಿಸುವುದು ಕಷ್ಟ ಎನ್ನಲಾಗುತ್ತಿದೆ. ನಾಯಿ ಹಿಡಿಯಲು ಅಥವಾ ಅವುಗಳಿಗೆ ಸಂತಾನ ಶಕ್ತಿ ಹರಣ ಶಸ್ತç ಚಿಕಿತ್ಸೆ ಮಾಡಲು ಸರ್ಕಾರ ನಿಗದಿ ಮಾಡಿರುವ ದರ ಅತ್ಯಂತ ಕಡಿಮೆ ಇದ್ದು, ಈ ಮೊತ್ತಕ್ಕೆ ಯಾರು ಕೂಡ ಮುಂದೆ ಬರುವುದಿಲ್ಲ. ಇದೇ ಕಾರಣಕ್ಕೆ ಮಡಿಕೇರಿ ಸೇರಿದಂತೆ ಹಲವಡೆ ಟೆಂಡರ್ ಕರೆದಿದ್ದ ಸಂದರ್ಭ ಯಾವುದೇ ಪ್ರಸ್ತಾವನೆಗಳು ಬಂದಿರಲಿಲ್ಲ ಎನ್ನುತ್ತಾರೆ ಅಧಿಕಾರಿಗಳು.