ಚಿಕ್ಕನಾಯಕನಹಳ್ಳಿಯಲ್ಲಿ ಬೀದಿನಾಯಿ, ಹಂದಿಗಳ ಹಾವಳಿ ; ಹಲವು ಬಾರಿ ಮನವಿ ಮಾಡಿದರೂ ಕ್ರಮ ಜರುಗಿಸದ ಪುರಸಭೆ ವಿರುದ್ಧ ಜನಾಕ್ರೋಶ

06 c n halli DOG photo 1
Published on

ಚಿಕ್ಕನಾಯಕನಹಳ್ಳಿ : ಪಟ್ಟಣದಲ್ಲಿ ಹಂದಿ, ನಾಯಿಗಳ ಹಾವಳಿ ತಪ್ಪಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ನಮಗೂ ಅದಕ್ಕೂ ಸಂಬಂಧವಿಲ್ಲದವರಂತೆ ವರ್ತಿಸುತ್ತಿದ್ದಾರೆ.

ಮಹಿಳಾ ಪೇದೆಯೊಬ್ಬರು ಇತ್ತೀಚೆಗೆ ದ್ವಿಚಕ್ರವಾಹನದಲ್ಲಿ ಶೆಟ್ಟಿಕೆರೆ ರಸ್ತೆಯಲ್ಲಿ ಹೋಗುವಾಗ ಹಂದಿ ಅಡ್ಡಬಂದು ಆಯತಪ್ಪಿ ಕೆಳಗೆ ಬಿದ್ದು ಗಾಯಗೊಂಡಿದ್ದರು. ಅಲ್ಲದೇ ನಾಯಿಗಳು ದಾಳಿ ಮಾಡಿ ಅನೇಕರನ್ನು ಕಚ್ಚಿವೆ. ಇಷ್ಟೇಲ್ಲ ನಡೆಯುತ್ತಿದ್ದರೂ ಯಾರೊಬ್ಬರೂ ನಿಯಂತ್ರಣಕ್ಕೆ ಮುಂದಾಗಿಲ್ಲ.

ಪಟ್ಟಣದ ಕೊಳಚೆ ಪ್ರದೇಶಗಳು ಹಾಗೂ ನಿವೇಶನಗಳಲ್ಲಿ ಗಿಡಗಂಟಿಗಳು, ಕುರುಚಲು ಗಿಡಗಳು ಬೆಳೆದಿದ್ದು, ಇದು ಹಂದಿ-ನಾಯಿಗಳ ಆವಾಸ ಸ್ಥಾನವಾಗಿದೆ. ಮಳೆ ನೀರುನಿಂತು ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗಗಳೂ ಹರಡುವ ಭೀತಿ ಹೆಚ್ಚಾಗಿದೆ.

ಈ ಹಿಂದೆ ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಮಾಡಿ ನಿಯಂತ್ರಿಸಲಾಗಿತ್ತು. ಈಗ ಅದ್ಯಾವುದು ಮಾಡದೇ ಇರುವುದರಿಂದ ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಪಟ್ಟಣದ ಮತಿಘಟ್ಟ ಗೇಟ್, ಖಾಸಗಿ ಬಸ್‌ನಿಲ್ದಾಣದ ಬಳಿಯ ಕೋಳಿ ಅಂಗಡಿಗಳ ಬಳಿ ನಾಯಿಗಳು ಹೆಚ್ಚಿದ್ದು, ದನ, ಕುರಿ, ಮೇಕೆಗಳ ಮೇಲೆ ದಾಳಿ ನಡೆಸುತ್ತಿವೆ. ಅಲ್ಲದೇ, ಚಿಕ್ಕಪುಟ್ಟ ಮಕ್ಕಳನ್ನು ಕಡಿಯುತ್ತಿವೆ.

ಈ ಹಿಂದೆ ನಾಯಿಗಳು ದಾಳಿ ಮಾಡಿದ್ದವು, ಆಗ ನಾಯಿ ಹಾಗೂ ಹಂದಿಗಳನ್ನು ಹಿಡಿಯುವಂತೆ ಪುರಸಭೆ ಅಧಿಕಾರಿಗಳಿಗೆ ಮನವಿ ಮಾಡಿದ್ದೆ. ಅಧಿಕಾರಿಗಳ್ಯಾರೂ ಗಮನಹರಿಸಲಿಲ್ಲ. ಸಿ.ಬಿ.ರೇಣುಕಸ್ವಾಮಿ, ಕನ್ನಡ ಸಂಘದ ತಾಲೂಕು ಅಧ್ಯಕ್ಷ ಫೆಬ್ರವರಿಯಲ್ಲಿ ನಾಯಿ ದಾಳಿ ನನ್ನ ಮೇಲೂ ಆಗಿದೆ. ಆದರೆ ನಾಯಿಗಳನ್ನು ಸಾಯಿಸುವಂತಿಲ್ಲ ವೆಂಬ ಹೈಕೋರ್ಟ್ ಆದೇಶವಿದೆ. ಆದ್ದರಿಂದ ನಾಯಿಗಳ ಸಂತನ ಶಕ್ತಿಹರಣ ಚಿಕಿತ್ಸೆ ಮಾಡಿಸುವ ಕೆಲಸನ ಮಾಡಲು ಟೆಂಡರ್ ಕರೆಯಲಾಗಿದ್ದು, ಟೆಂಡರ್‌ಗೆ ಯಾರೂ ಅರ್ಜಿ ಹಾಕಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಯಾರಾದರು ಟೆಂಡರ್ ಹಾಕಿದರೆ ಅವುಗಳ ಸಂಖ್ಯೆ ಕಡಿಮೆ ಮಾಡುವ ಕೆಲಸ ಮಾಡಲಾಗುವುದು. ಎಚ್.ವಿದ್ಯಾ ಆರೋಗ್ಯ ನಿರೀಕ್ಷಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net