ಉಳುವವನೇ ಭೂಮಿ ಒಡೆಯ ಮುಸಲ್ಮಾನರಿಗೆ ಅನ್ವಯಿಸಲ್ಲವೇ?

FotoJet
Published on

ಬಂಗಾರಪೇಟೆ: ಕಾಂಗ್ರೆಸ್​ ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ತಂದು ಉಳ್ಳವರ ಭೂಮಿ ಕಿತ್ತುಕೊಂಡ ಮೇಲೆ ನಿಮ್ಮ ವಕ್ಛ್​ ಬೋರ್ಡ್​ ಜಮೀನು ಹೇಗೆ ಉಳಿಯಿತು. ಉಳುವವನೇ ಭೂಮಿಯ ಒಡೆಯ ಎಂಬ ಕಾಂಗ್ರೆಸ್​ ತಂದ ಕಾನೂನು ಮುಸಲ್ಮಾನ ಸಮುದಾಯಕ್ಕೆ ಅನ್ವಯ ಆಗೋದಿಲ್ಲವೇ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್​ ಪ್ರಶ್ನಿಸಿದರು.

ರೈತರ, ಮಠ ಮಾನ್ಯಗಳ ಆಸ್ತಿಯನ್ನು ಕಬಳಿಸುತ್ತಿರುವ ವಕ್ಫ್​ ಮಂಡಳಿ ನೀತಿಯನ್ನು ಖಂಡಿಸಿ ನಮ್ಮ ಭೂಮಿ, ನಮ್ಮ ಹಕ್ಕು ಪ್ರತಿಭಟನೆಯ ಅಂಗವಾಗಿ ಶುಕ್ರವಾರ ಪಟ್ಟಣದ ಬಸ್​ ನಿಲ್ದಾಣದ ಬಳಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ರಾಜ್ಯ ಕಾಂಗ್ರೆಸ್​ ಸರ್ಕಾರ ವಕ್ಫ್​ ಸಚಿವ ಜಮೀರ್​ ಅಹಮ್ಮದ್​ ಖಾನ್​ ಅವರ ಸೂಚನೆಯ ಮೇರೆಗೆ ಕೋಲಾರದಲ್ಲಿ ನೂರಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿದ್ದ ರೈತರ ಕೃಷಿ ಭೂಮಿಯನ್ನು ವಕ್ಫ್​ ಆಸ್ತಿಯೆಂದು ಘೋಷಿಸಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಅಕ್ರಮ್​ ಪಾಷಾ ಅವರು ಸುಮಾರು 600 ಕ್ಕೂ ಹೆಚ್ಚು ಎಕರೆ ಭೂಮಿಯನ್ನು ವಕ್ಫ್​ ಎಂದು ಘೋಷಿಸಿ, ಅನ್ನದಾತರಿಗೆ ಮತ್ತು ಭೂಮಾಲೀಕರಿಗೆ ಅನ್ಯಾಯವೆಸಗಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯ ಕೋಲಾರ ತಾಲೂಕಿನಲ್ಲೇ 218 ಎಕರೆ ಭೂಮಿ ವಕ್ಫ್​ ಭೂಮಿ ಎಂದು ಘೋಷಿಸಿ ಅಕ್ರಮವಾಗಿ ಆದೇಶ ಹೊರಡಿಸಿದ್ದರು. ಇದೀಗ ನಮ್ಮ ಕೋಲಾರ ಜಿಲ್ಲೆ ಸೇರಿ ರಾಜ್ಯಾದ್ಯಂತ ವಕ್ಫ್​ ತನ್ನ ನಿರಂಕುಶ ಅಧಿಕಾರ ಬಳಸಿ ರೈತರ, ಶಿಕ್ಷಣ ಸಂಸ್ಥೆಗಳ, ಸ್ಮಾರಕಗಳ ಹಾಗೂ ಸರ್ಕಾರಿ ಕಟ್ಟಡಗಳು ನಮ್ಮದು ಎಂದು ಹೇಳುತ್ತಿದೆ. ರೈತರ ಭೂಮಿ ವಕ್ಫ್​ ಬೋರ್ಡ್​ಗೆ ವರ್ಗಾವಣೆ ಮಾಡಿದ್ದ ಭ್ರಷ್ಟ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ ನಡೆಸಿದ ಹೋರಾಟಕ್ಕೆ ಜನ ಬೆಂಬಲ ದೊರೆಯುತ್ತಿದೆ. ಬಿಜೆಪಿ ರೈತ ಪರವಾಗಿದ್ದು, ರಾಜ್ಯದ ಎಲ್ಲ ರೈತರ ಜಮೀನು, ಸರ್ಕಾರಿ ಆಸ್ತಿ, ಮಠಗಳು, ದೇವಸ್ಥಾನಗಳ ಆಸ್ತಿ ವಕ್ಫ್​ ಬೋರ್ಡ್​ ಕೈ ಬಿಡುವವರೆಗೂ ನಿರಂತರವಾಗಿ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಮಾತನಾಡಿ, ಮುಸ್ಲಿಮರ ಮತಬ್ಯಾಂಕ್​ ಗುರಿಯಾಗಿಸಿಕೊಂಡು ಕಾಂಗ್ರೆಸ್​ ಪದೇಪದೆ ಮತೀಯ ಓಲೈಕೆ ಮಾಡುತ್ತಿದೆ. ಆರಂಭದಲ್ಲಿ ಅಲ್ಪಸಂಖ್ಯಾತರಿಗೆ ಹತ್ತು ಸಾವಿರ ಕೋಟಿ ಘೋಷಣೆ ಮಾಡಿದ್ದ ಕಾಂಗ್ರೆಸ್​ ಸರ್ಕಾರ, ಬಳಿಕ ತನ್ನ ಒಂದೊಂದೇ ಅಜೆಂಡಾಗಳನ್ನು ಜಾರಿಗೊಳಿಸಲು ಆರಂಭಿಸಿದೆ. ವಕ್ಫ್​ ಮಂಡಳಿಯ ಭೂಕಬಳಿಕೆಯ ಲ್ಯಾಂಡ್​ ಜಿಹಾದಿಗೆ ಕಾಂಗ್ರೆಸ್​ ಸರ್ಕಾರ ಬೆನ್ನಿಗೆ ನಿಂತಿದೆ. ಬಳಿಕ ಗುತ್ತಿಗೆಯಲ್ಲೂ ಧರ್ಮದ ಆಧಾರದಲ್ಲಿ ಮುಸಲ್ಮಾನರಿಗೆ ಮೀಸಲಾತಿ ನೀಡಲು ಷಡ್ಯಂತ್ರ ರೂಪಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮುಖಂಡರಾದ ವಿ.ಮಾರ್ಕಂಡೇಗೌಡ, ಹನುಮಪ್ಪ, ತಿಪ್ಪಾರೆಡ್ಡಿ, ಸೀತಾರಾಮಪ್ಪ, ಮಹದೇವ್​, ವೆಂಕಟೇಶಪ್ಪ, ಪಾರ್ಥಸಾರಥಿ, ಕೆಸರನಹಳ್ಳಿ ಮಂಜುನಾಥ್​, ಚೌಡಪ್ಪ, ಬಿ.ರಮೇಶ್​, ಮುತ್ತು, ರಾಮಕೃಷ್ಣ, ನಾಗೇಶ್​, ಸುರೇಂದ್ರ, ಚಲಪತಿ, ಸುರೇಶ್​, ಅಜಯ್​ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net