ಯುವಪಡೆಗೆ ಹೊಡೆಯುವ ಶಕ್ತಿ ಇದೆಯೇ ?

new JOSHI NEW NEW
Published on

ಹುಬ್ಬಳ್ಳಿ : ಮೋದಿ, ಮೋದಿ ಎಂದು ಜೈಕಾರ ಹಾಕುವ ಯುವಕರ ಕಪಾಳಕ್ಕೆ ಹೊಡೆಯಿರಿ ಎಂಬ ಸಚಿವ ಶಿವರಾಜ ತಂಗಡಗಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಯುವ ಪಡೆಗೆ ಹೊಡೆಯುವ ಶಕ್ತಿ ನಿಮ್ಮ ಕೈಗೆ ಇದೆಯೇ ಎಂದು ತಂಡಗಿ ಅವರನ್ನು ಪ್ರಶ್ನಿಸಿದ್ದಾರೆ.

ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಈ ದೇಶದ ಆಸ್ತಿ. ಈ ದೇಶದ ಪರಿವಾರಕ್ಕೆ ಸೇರಿದವರು. ದೇಶವಾಸಿಗಳ ಆರಕ್ಷಕರು. ಅದಕ್ಕಾಗಿ ಜನರೇ ಮೋದಿಯವರಿಗೆ ಜೈಕಾರ ಕೂಗುತ್ತಿದ್ದಾರೆ. ಹೀಗಿರುವಾಗ ಅವರೆಲ್ಲರ ಕಪಾಳಕ್ಕೆ ಹೊಡೆಯುವ ‘ಶಕ್ತಿ‘ ನಿಮ್ಮ ಕೈಗೆ ಇದೆಯೇ ? ಎಂದು ಪ್ರಶ್ನಿಸಿದರು.

ಮೋದಿಯವರಿಗೆ ಜೈಕಾರ ಹಾಕುವವರ ಕಪಾಳಕ್ಕೆ ಹೊಡೆಯಬೇಕೆ ? ಯಾವ ಕಾರಣಕ್ಕೆ ? ಭಾರತದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಕ್ಕಾಗಿಯೇ? ಅಥವಾ ಜನರ ಒಳಿತಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದಕ್ಕಾಗಿಯೇ? ಎಂದು ಸಚಿವ ತಂಗಡಗಿ ಅವರನ್ನು ತರಾಟೆಗೆ ತೆಗೆದುಕೊಂಡರು.

ದೇಶದ ಪ್ರಧಾನ ಮಂತ್ರಿಯನ್ನು ಹೇಗೆ ಗೌರವಿಸಬೇಕು ಎಂಬ ಕಿಂಚಿತ್ತೂ ಆಲೋಚನೆ, ಸೌಜನ್ಯ ಕಾಂಗ್ರೆಸ್ ನಾಯಕರಿಗೆ ಇಲ್ಲ. ತೀರ ಉಡಾಫೆ ಮಾತನಾಡುತ್ತಾರೆ. ಇವರ ಅಸಹನೀಯ ಪದ ಬಳಕೆಗೆ ಯುವ ಪಡೆಯೇ ಉತ್ತರ ಕೊಡವ ಕಾಲ ದೂರವಿಲ್ಲ ಎಂದು ಜೋಶಿ ಎಚ್ಚರಿಕೆ ನೀಡಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಶಿವರಾಜ್ ತಂಗಡಗಿ ಒಬ್ಬ ಮಂತ್ರಿಯಾಗಿದ್ದುಕೊಂಡು ಪ್ರಧಾನಿ ಬಗ್ಗೆ, ದೇಶದ ಭವಿಷ್ಯದ ಆಸ್ತಿಯಾಗಿರುವ ಯುವ ಪಡೆ ಬಗ್ಗೆ ಹೀಗೆ ಕಪಾಳ ಮೋಕ್ಷದ ಹೇಳಿಕೆ ನೀಡಿರುವುದು ಅಕ್ಷಮ್ಯ ಎಂದು ಖಂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net