ರಾಜ್ಯದಲ್ಲಿ ಮುಖ್ಯಮಂತ್ರಿ, ಗೃಹ ಸಚಿವರು ಇದ್ದಾರೆಯೇ?: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನೆ

BJP State President B.Y. Vijayendra
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
Published on

ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಹತ್ಯೆಗಳು, ಪೊಲೀಸ್ ಠಾಣೆ ಮೇಲಿನ ದಾಳಿ ಸೇರಿದಂತೆ ಇನ್ನಿತರೆ ಅಪರಾಧ ಕೃತ್ಯಗಳನ್ನು ಗಮನಿಸಿದರೆ ಇಲ್ಲಿ ಮುಖ್ಯಮಂತ್ರಿ, ಗೃಹ ಸಚಿವರು ಇದ್ದಾರೆಯೇ ಎನ್ನುವ ಅನುಮಾನ ಕಾಡುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದ್ದು, ಬಿಹಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದು ವರ್ಷ ಪೂರ್ಣಗೊಳ್ಳುವುದರ ಒಳಗೆ ಕಾಂಗ್ರೆಸ್‌ನ ಆಡಳಿತ ವೈಖರಿ ಬಗ್ಗೆ ಜನರು ಆಕ್ರೋಶಗೊಂಡಿದ್ದಾರೆ. ಇದು ಅಸಮರ್ಥ ಸರ್ಕಾರವಾಗಿದ್ದು, ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿಕ್ರಿಯಿಸಿದರು.
ರಾಜ್ಯಸರ್ಕಾರದ ಆಡಳಿತ ವೈಖರಿ ಗಮನಿಸಿದರೆ ಲಾಲು ಪ್ರಸಾದ್ ಯಾದವ್ ಅವರ ಬಿಹಾರ ನೆನಪಾಗುತ್ತಿದೆ. ದಾವಣಗೆರೆಯ ಚನ್ನಗಿರಿಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಠಾಣೆಯನ್ನು ಧ್ವಂಸ ಮಾಡಲಾಗಿದೆ.
ಎರಡು ತಿಂಗಳಿಂದ ನಡೆಯುತ್ತಿರುವ ಹತ್ಯೆಗಳು, ಲವ್ ಜಿಹಾದ್ ಪ್ರಕರಣಗಳನ್ನು ನೋಡಿದರೆ ಮುಖ್ಯಮಂತ್ರಿ, ಗೃಹ ಸಚಿವರು ಇದ್ದಾರಾ ಎನ್ನುವ ಅನುಮಾನ ಮೂಡುತ್ತದೆ ಎಂದು ಬಿ.ವೈ.ವಿಜಯೇಂದ್ರ ಕಿಡಿಕಾಡಿದರು.
6 ಕ್ಷೇತ್ರಗಳಲ್ಲಿ ಗೆಲುವಿಗೆ ತಯಾರಿ:
ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಲು ಸಭೆ ಕರೆದಿದ್ದೇನೆ. ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಒಟ್ಟಾಗಿ ಸಭೆಯಲ್ಲಿ ಭಾಗಹಿಸಿದ್ದು, ನಾವು ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತಿದ್ದೇವೆ. ಪರಿಷತ್ ಚುನಾವಣೆಯಲ್ಲಿ ಎಲ್ಲ 6 ಕ್ಷೇತ್ರಗಳನ್ನು ಗೆಲ್ಲಲು ನಾವು ತಯಾರಿ ಮಾಡುತ್ತಿದ್ದೇವೆ ಎಂದರು. ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಪ್ರಕರಣದ ಕುರಿತು ಪ್ರತಿಕ್ರಿಯಿಸಲು ವಿಜಯೇಂದ್ರ ನಿರಾಕರಿಸಿದರು.
ಸೂಕ್ತ ಜಾಗದಲ್ಲಿ ಉತ್ತರ ಕೊಡುವೆ:
ಮೈಸೂರಿನಲ್ಲಿ ಪ್ರತಾಪ್‌ಸಿಂಹ ಅವರಿಗೆ ಟಿಕೆಟ್ ಕೈ ತಪ್ಪಲು ವಿಜಯೇಂದ್ರ ಕಾರಣ ಎನ್ನುವ ಟೀಕೆಗಳನ್ನು ಮಾಡಲಾಗುತ್ತಿದೆ. ಯಾರಿಗೆ ಯಾವಾಗ ಉತ್ತರ ಕೊಡಬೇಕು, ಎಲ್ಲಿ ಕೊಡಬೇಕು ಅಲ್ಲಿಯೇ ಕೊಡುತ್ತೇನೆ. ನಾನು ರಾಜ್ಯಾಧ್ಯಕ್ಷನಾದರೂ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ರಾಷ್ಟ್ರೀಯ ಅಧ್ಯಕ್ಷರೇ ತೀರ್ಮಾನ ಕೈಗೊಳ್ಳುತ್ತಾರೆ. ಈ ವಿಚಾರದಲ್ಲಿ ಹಲವರು ಏನೇನೋ ಮಾತನಾಡಿದ್ದಾರೆ. ಸರಿಯಾದ ಸಮಯದಲ್ಲಿ ಉತ್ತರ ಕೊಡುತ್ತೇನೆ ಎಂದು ವಿಜಯೇಂದ್ರ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net