ಮಾಧ್ಯಮ ಅಭಿವ್ಯಕ್ತಿ ಸ್ವಾತಂತ್ರೃಕ್ಕೆ ಧಕ್ಕೆ ತರುವುದಿಲ್ಲ

h15-Journalist 1
Published on

ಹುಬ್ಬಳ್ಳಿ: ಊಹಾ ಪತ್ರಿಕೋದ್ಯಮ ಬಿಟ್ಟು ಜೈ ವಿಚಾರವುಳ್ಳ ವರದಿಗಳನ್ನು ಬಿತ್ತರಿಸಬೇಕು. ನಮ್ಮ ಸರ್ಕಾರ ಮಾಧ್ಯಮ ಅಭಿವ್ಯಕ್ತ ಸ್ವಾತಂತ್ರೃಕ್ಕೆ ಆದ್ಯತೆ ನೀಡುತ್ತದೆಯೇ ಹೊರತು, ಧಕ್ಕೆ ತರುವ ಕೆಲಸ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಕರ್ತರು ಶಿಕ್ಷಣವಂತರು. ನಿಮ್ಮ ಹಕ್ಕುಗಳ ರಕ್ಷಣೆಗೆ ಸಂಘಟಿತರಾಗುತ್ತಿರುವುದು ಹೆಮ್ಮೆಯ ವಿಷಯ. ಸಂಘದ ಅಧ್ಯಕ್ಷರು ಕೆಲ ಬೇಡಿಕೆ ಇಟ್ಟಿದ್ದಾರೆ. ಅವುಗಳಲ್ಲಿ ಯ್ಯೂಟ್ಯೂಬ್, ಡಿಜಿಟಲ್ ಮಾಧ್ಯಮಕ್ಕೆ ಪರವಾನಗಿ ನೀಡುವ ಕುರಿತು ಕ್ರಮ ಕೈಗೊಳ್ಳಲಾಗುವುದು. ಪತ್ರಕರ್ತರು ನ್ಯಾಯಯುತವಾಗಿರಬೇಕು. ವಸ್ತುಸ್ಥಿತಿ ಆಧಾರವಾಗಿಟ್ಟುಕೊಂಡು ವರದಿ ಮಾಡಬೇಕು. ಏಕೆಂದರೆ ಜನ ಮಾಧ್ಯಮಗಳ ಮೇಲೆ ಹೆಚ್ಚು ಭರವಸೆ ಇಟ್ಟಿದ್ದಾರೆ. ಆ ಭರವಸೆ ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ಸುಳ್ಳು ಸುದ್ದಿ ತಡೆಗೆ ಕಾನೂನು ರಚಿಸಲು ನಮ್ಮ ಸರ್ಕಾರ ಸಿದ್ಧವಾಗಿದೆ ಎಂದರು.

ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಸಂಘಟನೆ ಮೂಲಕ ನಾನು ಈ ಮಟ್ಟಕ್ಕೆ ಬಂದಿದ್ದೇನೆ. ನೀವು ಇದೀಗ ಸಂಘ ಕಟ್ಟಿಕೊಂಡಿರುವುದು ಖುಷಿ ವಿಚಾರ. ಈ ಮೊದಲು ಸದನದೊಳಗೆ ಖಾಸಗಿ ಸುದ್ದಿ ವಾಹಿನಿಗಳನ್ನು ಬಿಟ್ಟುಕೊಳ್ಳುತ್ತಿರಲಿಲ್ಲ. ನಾನು ಸಭಾಪತಿಯಾದ ಮೇಲೆ ಅವಕಾಶ ನೀಡಿದ್ದೇನೆ. ನಿಮ್ಮ ಸಂಘಟನೆಗೆ ಮತ್ತಷ್ಟು ಬಲ ದೊರೆಯಲಿ ಎಂದು ಶುಭ ಹಾರೈಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಮಹೇಶ ಟೆಂಗಿನಕಾಯಿ ಅವರು ಸಿಎಂ ಸಿದ್ದರಾಮಯ್ಯ ಅವರ ಸಂದರ್ಶನ ಮಾಡಿದಾಗ ಜನರೆಲ್ಲ ನಗೆಗಡಲಲ್ಲಿ ತೇಲಿದರು.

ಅಸೋಸಿಯೇಷನ್ ಅಧ್ಯಕ್ಷ ಪ್ರಕಾಶ ನೂಲ್ವಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಕೃಷಿ ಸಚಿವ ಚಲುವರಾಯ ಸ್ವಾಮಿ, ಶಾಸಕ ಹಾಗೂ ಸ್ಲಂ ಬೋರ್ಡ್ ಅಧ್ಯಕ್ಷ ಪ್ರಸಾದ ಅಬ್ಬಯ್ಯ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ, ಮೇಯರ್ ಜ್ಯೋತಿ ಪಾಟೀಲ, ಶಾಸಕರಾದ ಎಂ.ಆರ್. ಪಾಟೀಲ, ಶ್ರೀನಿವಾಸ ಮಾನೆ, ಯಾಸೀರಖಾನ್ ಪಠಾಣ, ವಿಜಯಾನಂದ ಕಾಸಪ್ಪನವರ, ಎನ್.ಎಚ್. ಕೋನರಡ್ಡಿ, ಬಸವರಾಜ ಶಿವಣ್ಣವರ, ಎಂಎಲ್‌ಸಿ ಎಫ್.ಎಚ್. ಜಕ್ಕಪ್ಪನವರ, ಮುಖ್ಯ ಸಚೇತಕ ಅಶೋಕ ಪಟ್ಟಣ, ಪತ್ರಕರ್ತರಾದ ಎಸ್. ರವಿಕುಮಾರ, ಸತೀಶ ಅಂಜನಪ್ಪ, ಅಸೋಸಿಯೇಷನ್ ಪದಾಧಿಕಾರಿಗಳು ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net