

ಹುಬ್ಬಳ್ಳಿ: ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಇಲ್ಲದ ಪ್ರಶ್ನೆ ಕೇಳಲಾಗುತ್ತಿದೆ. ಜಾತಿ-ಜಾತಿಗಳ ಮಧ್ಯೆ ಸಂಘರ್ಷ ನಡೆಸುತ್ತಿದೆ. ಧರ್ಮ ನೋಡಿ ಮೀಸಲಾತಿ ಕೊಡುವ ಅಧಿಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೆಯೇ? ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಪ್ರಶ್ನೆ ಮಾಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಆಯೋಗ ಹೊಸ ಜಾತಿಗಳನ್ನು ಸೃಷ್ಟಿಸಿದೆ. ಈ ಅಧಿಕಾರ ಆಯೋಗಕ್ಕಿಲ್ಲ. ಅಧ್ಯಯನ ಮಾಡದೇ ಮಾಡಲಾಗಿದೆ. ಧರ್ಮ ನೋಡಿ ಮೀಸಲಾತಿ ಕೊಡುವ ಅಧಿಕಾರ ಸಂವಿಧಾನದಲ್ಲಿಯೇ ಇಲ್ಲ. ಹಿಂದುಳಿದ ವರ್ಗದಿಂದ ಬಂದಿರುವ ಸಿದ್ದರಾಮಯ್ಯ ಅವರು, ಜಾತ್ಯತೀತ ಬಗ್ಗೆ ಬಹಳಷ್ಟು ಮಾತನಾಡುತ್ತಾರೆ. ಅತ್ಯಂತ ಕೆಟ್ಟ ಜಾತಿ ಪದ್ಧತಿಯನ್ನು ತಂದ ಅಪಕೀರ್ತಿಗೆ ಅವರು ಒಳಗಾಗಲಿದ್ದಾರೆ ಎಂದು ಹರಿಹಾಯ್ದರು.
ಕೇಂದ್ರ ಸರ್ಕಾರ ಜನಗಣತಿ ಮಾಡಲು ಸಿದ್ಧವಾಗಿದೆ. ಆಗ ಸ್ಪಷ್ಟವಾಗಿ ಅಂಕಿ-ಅಂಶಗಳು ಲಭಿಸಲಿವೆ. ಇದಕ್ಕೂ ಪೂರ್ವದಲ್ಲಿಯೇ ರಜ್ಯ ಸರ್ಕಾರ ಸಮೀಕ್ಷೆ ನಡೆಸಲು ಹೊರಟಿರುವುದು ರಾಜಕೀಯ ಲಾಭ ತೆಗೆದುಕೊಳ್ಳಲು. ಇದರಿಂದ ಯಾರಿಗೂ ಲಾಭ ಸಿಗುವುದಿಲ್ಲ. ಸಾಮಾಜಿಕ ಸಂಘರ್ಷ ಉದ್ಭವಿಸಿದೆ. ಹಾಗಾಗಿ ಬಹಳಷ್ಟು ಜನರು ಸಮೀಕ್ಷೆಯಲ್ಲಿ ಭಾಗವಹಿಸುವ ಆಸಕ್ತಿ ಹೊಂದುತ್ತಿಲ್ಲ ಎಂದು ದೂರಿದರು.
ದಲಿತ ಹಾಗೂ ಹಿಂದುಳಿದ ವರ್ಗಗಳ ವಿರೋಧಿ ನೀತಿ ಅನುಸರಿಸುತ್ತ ಬಂದಿದೆ. 2013ರಿಂದ ರಾಜ್ಯದಲ್ಲಿ ಈ ಪ್ರಯತ್ನ ನಡೆದಿದೆ. ಎಸ್‌ಸಿ, ಎಸ್‌ಟಿ ಸಮೀಕ್ಷೆ ಮಾಡಲಾಗಿದೆ. ಮತ್ತೆ ಅವರನ್ನೂ ಈ ಸಮೀಕ್ಷೆಯಲ್ಲಿ ಮಾಡಿಸಲಾಗುತ್ತಿದೆ. ಒಟ್ಟಾರೆ ಸ್ಪಷ್ಟತೆ ಇಲ್ಲ. ಯಾವ ಉದ್ದೇಶಕ್ಕೆ ಮಾಡಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸುತ್ತಿಲ್ಲ. ಪರಿಶಿಷ್ಟ ಜಾತಿಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಮೀಸಲಾತಿ ಕೊಟ್ಟಿಲ್ಲ. ಮೀಸಲಿಟ್ಟ ಅನುದಾನ ಬೇರೆಯದ್ದಕ್ಕೆ ಬಳಸಲಾಗಿದೆ. ಇದು ದಲಿತ ವಿರೋಧಿ ನೀತಿ. ಹಿಂದುಳಿದ ವರ್ಗಗಳ ಆಯೋಗಕ್ಕೆ ಮೀಸಲಿಟ್ಟಿದ್ದ 340 ಕೋಟಿ ರೂ. ಅನುದಾನವನ್ನು ಆರ್ಥಿಕ ಇಲಾಖೆ ಅನುಮತಿ ಪಡೆದು ಜಾತಿಗಣತಿಗೆ ಬಳಸಲು ವಿತ್‌ಡ್ರಾ ಮಾಡಲಾಗಿದೆ. ಹಿಂದುಳಿದ ವರ್ಗದ ಜನರಿಗೂ ಈ ಮೂಲಕ ಕಾಂಗ್ರೆಸ್ ಅನ್ಯಾಯ ಮಾಡಿದೆ. ಭಾಷಣದಿಂದ ಮತಗಳನ್ನು ಪಡೆದು ಮೋಸ ಮಾಡುತ್ತಿರುವುದು ಕಾಂಗ್ರೆಸ್ ಎಂದು ಚಾಟಿ ಬೀಸಿದರು.