

ಬೆಳಗಾವಿ: ಭೂಮಿ, ಗಾಳಿ, ನೀರು ಎಲ್ಲ ಮನುಷ್ಯರಿಗೂ ಎಂಬುದು ಲೋಕಾರೂಢಿಯ ಮಾತು. ಆದರೆ, ಮೂಲಭೂತವಾಗಿ ಎಲ್ಲರಿಗೂ ದಕ್ಕಬೇಕಾದ ನೆಲ ಕೆಲವೊಮ್ಮೆ ಉಳ್ಳವರ ಪಾಲಾಗಿರುತ್ತದೆ. ಆದರೆ, ದೊಡ್ಡವರ ಪಾಲಾದ ಖಾಲಿ ಜಾಗ ಸ್ವಚ್ಛತೆಯಿಂದಲೂ ದೂರವಾಗಿದ್ದು, ಬೆಳಗಾವಿ ನಗರದ ಕೆಲ ಖಾಲಿ ನಿವೇಶನಗಳಿಗೂ ಅಂಥದ್ದೇ ದುಸ್ಥಿತಿ ಬಂದೊದಗಿದೆ.
ದಿನದಿಂದ ದಿನಕ್ಕೆ ವ್ಯಾಪಕವಾಗಿ ಬೆಳೆಯುತ್ತಿರುವ ಸ್ಮಾರ್ಟ್‌ಸಿಟಿ ಬೆಳಗಾವಿ ನಗರದಲ್ಲಿ ಭೂಮಿಗೆ ಬಂಗಾರಕ್ಕಿಂತಲೂ ಹೆಚ್ಚಿನ ಬೆಲೆ ಬಂದಿದೆ. ನಿವೇಶನ ದುಬಾರಿಯಾಗಿದ್ದರಿಂದ ಬಡವರಿಗೆ ಸೂರು ಗಗನ ಕುಸುಮವಾಗುತ್ತಿದೆ. ಆದರೆ, ಸ್ಥಿತಿವಂತರು ಹೂಡಿಕೆ ಮಾಡಲೆಂದೇ ಅನಗತ್ಯವಾಗಿ ಖರೀದಿಸಿ ನಿವೇಶನಗಳನ್ನು ಖಾಲಿ ಬಿಡುತ್ತಿದ್ದಾರೆ. ಇದರಿಂದಾಗಿ ನಗರಾದ್ಯಂತ ಖಾಲಿ ನಿವೇಶನಗಳಲ್ಲಿ ಗಿಡಗಂಟಿ ಬೆಳೆದಿರುವುದಲ್ಲದೆ ತ್ಯಾಜ್ಯ ಸಂಗ್ರಹಗೊಂಡು ರೋಗ ಹರಡುವ ತಾಣಗಳಾಗಿ ಮಾರ್ಪಟ್ಟಿವೆ. ಬೆಳಗಾವಿ ಮಹಾನಗರ ಪಾಲಿಕೆ ಹಾಗೂ ದಂಡುಮಂಡಳಿ ವ್ಯಾಪ್ತಿಯ ಜನವಸತಿ ಪ್ರದೇಶಗಳಲ್ಲಿ ಖಾಲಿ ಇರುವ ನಿವೇಶನಗಳಲ್ಲಿ ಕುರುಚಲು ಗಿಡ ಬೆಳೆದಿವೆ. ಈ ಭಾಗದಲ್ಲಿ ಮಕ್ಕಳು ಮತ್ತು ಮಹಿಳೆಯರು ಸಂಚರಿಸಲೂ ಭಯಪಡುವಂತಾಗಿದೆ.
ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಬಹುತೇಕ ಎಲ್ಲ ವಾರ್ಡ್ ಗಳಲ್ಲಿ ದಶಕಗಳಿಂದಲೂ ಖಾಲಿ ಇರುವ ನಿವೇಶನದ ಮಾಲೀಕರು ಯಾರು ಎನ್ನುವುದು ಪಾಲಿಕೆಗೂ ಗೊತ್ತಿಲ್ಲ. ಮತ್ತೊಂದೆಡೆ ಮಾಲೀಕರ ಮಾಹಿತಿ ಲಭಿಸಿದರೂ ಕೂಡ ಸ್ವಚ್ಛಗೊಳಿಸಿಕೊಳ್ಳಲು ಯಾರೂ ಮುಂದಾಗುತ್ತಿಲ್ಲ. ಅಲ್ಲಿ ಬೆಳೆದ ಕಸ, ಗಿಡಗಳಿಂದಾಗಿ ಸೊಳ್ಳೆಗಳು ಉತ್ಪತ್ತಿಯಾಗಿ, ರೋಗ ರುಜಿನಗಳು ಉಲ್ಬಣಗೊಳ್ಳುತ್ತಿವೆ ಎಂದು ಭಾಗ್ಯನಗರದ ಶಂಭುನಾಥ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನೂ ಕೆಲವೆಡೆ ಪ್ಲಾಸ್ಟಿಕ್, ಮದ್ಯದ ಬಾಟಲ್‌ಗಳು, ಹಸಿ ಮತ್ತು ಒಣ ತ್ಯಾಜ್ಯ, ಮಾಂಸದ ಅವಶೇಷಗಳು ಸೇರಿ ಒಟ್ಟಾರೆ ತ್ಯಾಜ್ಯದ ಕೂಪಗಳಾಗಿವೆ.
ಸ್ಥಳೀಯ ಅಜಮ್ ನಗರ, ನೆಹರೂ ನಗರ, ತಿಳಕವಾಡಿ, ಶಹಾಪುರ, ವಡಗಾಂವಿ, ಭಾಗ್ಯ ನಗರ, ಪಿರಣವಾಡಿ, ಸದಾಶಿವ ನಗರ, ಹಳೆ ಪಿ.ಬಿ.ರಸ್ತೆ, ಬಾಕ್ಸೈಟ್ ರಸ್ತೆ, ಕಾಂಗ್ರೆಸ್ ರಸ್ತೆ ಹಾಗೂ ಕಪಿಲೇಶ್ವರ ದೇವಸ್ಥಾನದ ಸಮೀಪದಲ್ಲಿನ ಬಹುತೇಕ ಪ್ರತಿ ಬಡಾವಣೆಗಳಲ್ಲೂ ನೂರಾರು ಖಾಲಿ ನಿವೇಶನಗಳಿದ್ದು, ಗಿಡಗಂಟಿ ಬೆಳೆದಿರುವುದಲ್ಲದೇ ಹಳೇ ಕಟ್ಟಡದ ತ್ಯಾಜ್ಯ ಹಾಗೂ ಇನ್ನಿತರ ವಸ್ತುಗಳನ್ನೂ ಅಲ್ಲೇ ಗೂಡು ಹಾಕಿರುವುದರಿಂದ ಇಲಿ, ಹೆಗ್ಗಣ, ಹಾವು, ಚೇಳು ಸೇರಿ ಇತರ ವಿಷಜಂತುಗಳ ಆವಾಸ ಸ್ಥಾನಗಳಾಗಿವೆ. ಇವುಗಳಿಂದಾಗಿ ನೆರೆ ಮನೆಯವರು ನಿತ್ಯ ಆತಂಕದಿಂದಲೇ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರವು ದಿನೇ ದಿನೆ ವಿಸ್ತಾರವಾಗುತ್ತಿದೆ. ಇಲ್ಲಿನ ಭೌಗೋಳಿಕ ವ್ಯಾಪ್ತಿಯ ಜತೆಗೆ ಆರ್ಥಿಕ ಮತ್ತು ಸಾಮಾಜಿಕವಾಗಿ ಬೆಳೆಯುತ್ತಿದೆ. ಇಂಥ ಸಂದರ್ಭಗಳಲ್ಲಿ ಇಲ್ಲಿನ ವಾತಾವರಣವನ್ನು ಆರೋಗ್ಯಕರವಾಗಿ ಕಾಪಾಡುವುದು ಅಧಿಕಾರಿಗಳು ಮತ್ತು ಸ್ಥಳೀಯ ನಾಗರಿಕರ ಜವಾಬ್ದಾರಿ. ಇದಕ್ಕಾಗಿ ನಗರದಲ್ಲಿನ ಖಾಲಿ ನಿವೇಶನಗಳ ಸ್ವಚ್ಛತೆಗೆ ಬೃಹತ್ ಜಾಗೃತಿ ಅಭಿಯಾನದ ಅವಶ್ಯಕತೆಯಿದ್ದು, ದೊಡ್ಡ ಮಟ್ಟದಲ್ಲಿ ನಡೆದಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎನ್ನುವುದು ಟೀಚರ್ಸ್ ಕಾಲನಿ ನಿವಾಸಿಗಳಾದ ಪರಮೇಶ ಹಿರೇಮಠ ಹಾಗೂ ಮಹ್ಮದ್‌ಹುಸೇನ್ ಅಭಿಪ್ರಾಯ.
ಮಹಾನಗರದಲ್ಲಿರುವ ಖುಲ್ಲಾ ಜಾಗಗಳನ್ನು ಅಂದಗೊಳಿಸಲು ಅವಕಾಶಗಳಿವೆ. ಗುಂಟೆ ಅಥವಾ ಅದಕ್ಕಿಂತಲೂ ಹೆಚ್ಚು ಖಾಲಿ ಜಾಗ ಖರೀದಿಸಿ ಅಲ್ಲಿ ಮನೆ ನಿರ್ಮಿಸದೆ ಹಾಗೇ ಬಿಟ್ಟಿರುವ ಮಾಲೀಕರು ಆ ಜಾಗದಲ್ಲಿ ಸೃಜನಾತ್ಮಕ ಚಟುವಟಿಕೆ ಕೈಗೊಳ್ಳಲು ಅವಕಾಶವಿದೆ. ಖಾಲಿ ಜಾಗದಲ್ಲಿ ನೀಲಗಿರಿ, ಸಾಗವಾನಿ ಗಿಡ ಬೆಳೆಯಬಹುದು. ದೀರ್ಘಕಾಲಿಕ ಗಿಡ ಅಥವಾ ಬೆಳೆ ಒಲ್ಲದಿದ್ದರೆ ಅಲ್ಪಕಾಲಿಕವಾದ ತರಕಾರಿ ಬೆಳೆಯಬಹುದು. ತರಹೇವಾರಿ ಹೂವು, ತರಕಾರಿ, ಬಳ್ಳಿಗಳನ್ನು ಬೆಳೆಯಬಹುದು. ಆ ನಿಟ್ಟಿನಲ್ಲಿ ಜನರು ಮುಂದಡಿ ಇಟ್ಟರೆ ಮನೆ ಬಳಕೆಗೆ ತರಕಾರಿಯೂ ಆಗುತ್ತದೆ. ಜತೆಗೆ ಖಾಲಿ ನಿವೇಶನ ಸ್ವಚ್ಛವಾಗಿಯೂ ಇರುತ್ತದೆ. ಜನರ ಸಹಭಾಗಿತ್ವವೆಂದರೆ ನಮ್ಮ ಸುತ್ತಮುತ್ತಲಿನ ಸಾರ್ವಜನಿಕ ಸ್ಥಳ ಸ್ವಚ್ಛ, ಸುಂದರವಾಗಿಟ್ಟುಕೊಳ್ಳುವುದು ಹಾಗೂ ಸ್ವಂತ ಜಾಗ ಸದುಪಯೋಗಪಡಿಸಿಕೊಳ್ಳುವುದೂ ಆಗಿದೆ.
ಬೆಳಗಾವಿ ನಗರದ ಖಾಲಿ ನಿವೇಶನಗಳನ್ನು ಮಳೆಗಾಲಕ್ಕೂ ಮುನ್ನವೇ ಸ್ವಚ್ಛಗೊಳಿಸಬೇಕಿದ್ದ ಪಾಲಿಕೆಯೂ ಇದೀಗ ಎಚ್ಚೆತ್ತುಕೊಂಡಂತಿದೆ. ನೂತನ ಪಾಲಿಕೆ ಅಶೋಕ ದುಡಗುಂಟಿ ಸಮರ್ಪಕ ಕಸ ವಿಲೇವಾರಿಗೆ ಆದ್ಯತೆ ನೀಡುತ್ತಿದ್ದಾರೆ. ಮೂರ‌್ನಾಲ್ಕು ದಿನಗಳಿಂದ ನಗರದ ವಿವಿಧೆಡೆ ಪರಿಶೀಲನೆ ನಡೆಸಿ ನಿವೇಶನದಲ್ಲಿ ಸ್ವಚ್ಛತೆ ಕಾಪಾಡದೆ ಇತರರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಖಾಲಿ ನಿವೇಶನಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪರಿಸರ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ, ಈ ವಿಚಾರವಾಗಿ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳದಿದ್ದರೆ ನಗರ ಕಲುಷಿತಗೊಂಡು ಅನಾರೋಗ್ಯಕರ ವಾತವಾರಣ ಸೃಷ್ಟಿಯಾಗುತ್ತದೆ. ಖಾಲಿ ನಿವೇಶನಗಳ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ನೋಟಿಸ್ ನೀಡಲಾಗುತ್ತಿದೆ. ದಂಡ ಪಾವತಿಸಿಕೊಳ್ಳುವ ಜತೆ ಸ್ವಚ್ಛತೆಗೂ ಆದ್ಯತೆ ನೀಡಲಾಗುತ್ತಿದೆ.|ಅಶೋಕ ದುಡಗುಂಟಿ ಆಯುಕ್ತರು, ಬೆಳಗಾವಿ ಮಹಾನಗರ ಪಾಲಿಕೆ
| ರವಿ ಗೋಸಾವಿ ಬೆಳಗಾವಿ