ಶಿಥಿಲಾವಸ್ಥೆಯಲ್ಲಿ ದೊಡ್ಡೂರು ಶಾಲೆ!

FotoJet (1)
Published on

ಜಿ.ನಾಗರಾಜ್​ ಬೂದಿಕೋಟೆ

ಶಿಕ್ಷಣ ಇಲಾಖೆ ಶಾಲಾ ಕಟ್ಟಡಗಳನ್ನು ದುರಸ್ತಿ ಮಾಡಲು ಮುಂದಾಗದ ಕಾರಣ ಶಿಥಿಲಗೊಂಡ ಕಟ್ಟಡಗಳಲ್ಲಿಯೇ ಮಕ್ಕಳು ಜೀವ ಭಯದಲ್ಲಿ ಪಾಠ ಕೇಳಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ಸರ್ಕಾರಿ ಶಾಲೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ಹೇಳುತ್ತಿದೆಯಾದರೂ ಗ್ರಾಮೀಣ ಭಾಗದ ಬಹುತೇಕ ಶಾಲಾ ಕಟ್ಟಡಗಳು ಶಿಥಿಲಗೊಂಡು ಬೀಳುವ ನೆಲಕ್ಕುರುಳುವ ಹಂತ ತಲುಪಿವೆ. ಇದಕ್ಕೆ ತಾಜಾ ಉದಾಹರಣೆಯಾಗಿ ಬಂಗಾರಪೇಟೆ ತಾಲೂಕಿನ ಡಿಕೆ ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯೇ ಸಾಕ್ಷಿ.

ಗ್ರಾಮದ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೂ 82 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಮಕ್ಕಳ ಕಲಿಕೆಗೆ ಅನುಗುಣವಾಗಿ ಸುಮಾರು 70 ವರ್ಷಗಳಷ್ಟು ಹಳೆಯದಾದ 5 ಕಟ್ಟಡಗಳಿದ್ದು, ಇವುಗಳ ಪೈಕಿ 3 ಕಟ್ಟಡಗಳು ಸಂಪೂರ್ಣ ಶಿಥಿಲಗೊಂಡಿದೆ. ಉಳಿದ ಎರಡು ಕಟ್ಟಡಗಳು ಅಲ್ಪಸ್ವಲ್ಪ ಚೆನ್ನಾಗಿದೆಯಾದರೂ ಮಳೆ ಬಂದರೆ ಸೋರುತ್ತದೆ. ಗೋಡೆಗಳು ಬಿರುಕು ಬಿಟ್ಟಿದ್ದು, ಕಟ್ಟಡದ ಮೇಲ್ಛಾವಣಿಯ ಸೀಲಿಂಗ್​ ಆಗಾಗ ಮಕ್ಕಳ ಮೇಲೆ ಬೀಳುತ್ತಿದ್ದು, ಪ್ರಾಣ ಭಯದಲ್ಲಿ ಪಾಠ ಕೇಳಬೇಕಾದ ಸ್ಥಿತಿ ಬಂದಿದೆ.

ಇಲ್ಲಿನ ಸರ್ಕಾರಿ ಶಾಲೆಗೆ ಅನಂತಪುರ, ದೊಡ್ರಹಳ್ಳಿ, ಕುರುಬರಹಳ್ಳಿ, ಕಾವರನಹಳ್ಳಿ ಸೇರಿ ಸುಮಾರು 7 ಗ್ರಾಮಗಳಿಂದ ವ್ಯಾಸಂಗಕ್ಕೆ ಸುಮಾರು 200 ಮಕ್ಕಳು ಬರುತ್ತಿದ್ದರು. ಕಟ್ಟಡಗಳು ಶಿಥಿಲಗೊಂಡು ಬೀಳುವ ಹಂತ ತಲುಪಿರುವ ಕಾರಣ ಪಾಲಕರು ಶಾಲೆಗೆ ಕಳುಹಿಸಲು ಭಯಗೊಂಡಿದ್ದಾರೆ. ಹಾಗಾಗಿ ಬೇರೆ ಶಾಲೆಗಳಿಗ ಕಳುಹಿಸುತ್ತಿದ್ದಾರೆ. ಈಗ ಶಾಲೆಗೆ ಬರುತ್ತಿರುವ ಮಕ್ಕಳ ಪಾಲಕರೂ ಸಹ ತಮ್ಮ ಮಕ್ಕಳನ್ನು ಈ ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬುದು ಸ್ಥಳಿಯರ ದೂರಾಗಿದೆ.

ಗ್ರಾಮದ ಶಾಲೆಗೆ ಈ ಹಿಂದೆ ಶಿಕ್ಷಕರ ಸಮಸ್ಯೆ ಎದ್ದು ಕಾಣುತ್ತಿತ್ತು. ಗ್ರಾಮಸ್ಥರು ಹಲವು ಬಾರಿ ಮನವಿ ಸಲ್ಲಿಸಿದ್ದರಿಂದ ಶಿಕ್ಷಣ ಇಲಾಖೆ ಶಿಕ್ಷಕರನ್ನು ನಿಯೋಜನೆ ಮಾಡಿದೆ. ಜತೆಗೆ ಶಾಲೆಯ ಕಿಟಕಿ ಮತ್ತು ಬಾಗಿಲುಗಳು ಹಾಳಾಗಿವೆ. ಈ ಹಿಂದೆ ಶಾಲೆಯ ಹಳೆಯ ವಿದ್ಯಾರ್ಥಿಗಳು ಕಿಟಕಿ, ಬಾಗಿಲುಗಳನ್ನು ದುರಸ್ತಿ ಮಾಡಿಸಿದ್ದರು. ಈಗ ಕಟ್ಟಡವೇ ಸಂಪೂರ್ಣ ಶಿಥಿಲಗೊಂಡಿರುವ ಕಾರಣ ದುರಸ್ತಿಗೆ ಪಂಚಾಯಿತಿ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಕಾರ್ಯಪ್ರವೃತ್ತರಾಗಿಲ್ಲ.

ಹೀಗಾಗಿ ಮಕ್ಕಳನ್ನು ಶಿಥಿಲಗೊಂಡ ಕಟ್ಟಡದಲ್ಲಿ ಕೂರಿಸಲು ಹಿಂದೇಟು ಹಾಕಿದ ಶಿಕ್ಷಕರು, ಸಿಬ್ಬಂದಿ ಕೊಠಡಿಯನ್ನೇ ಮಕ್ಕಳ ಬೋಧನೆಗೆ ಬಳಸುತ್ತಿದ್ದಾರೆ. ಇನ್ನಾದರೂ ಗ್ರಾಮದ ಶಾಲಾ ಕಟ್ಟಡಗಳನ್ನು ದುರಸ್ತಿ ಅಥವಾ ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಪಾಲಕರ ಒತ್ತಾಯಿಸಿದ್ದಾರೆ.

"ಗ್ರಾಮದ ಪ್ರಾಥಮಿಕ ಶಾಲೆಯ ಮೂರು ಕಟ್ಟಡಗಳು ಸಂಪೂರ್ಣ ಶಿಥಿಲಗೊಂಡಿವೆ. ಮೇಲ್ಛಾವಣಿ ಬಿರುಕು ಬಿಟ್ಟು ಉದುರುತ್ತಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಕಟ್ಟಡಗಳು ಸೂಕ್ತವಾಗಿಲ್ಲ. ಹಾಗಾಗಿ ಕಟ್ಟಡಗಳನ್ನು ಕೆಡವಿ, ನೂತನ ಕಟ್ಟಡಗಳನ್ನು ನಿರ್ಮಿಸಲು ಶಿಕ್ಷಣ ಇಲಾಖೆ ಅಥವಾ ಜನಪ್ರತಿನಿಧಿಗಳು ಮುಂದಾಗಬೇಕು. ಇಲ್ಲವಾದರೆ ಶಾಲೆಗೆ ಬೀಗ ಜಡಿದು ಪ್ರತಿಭಟನೆ ಮಾಡಬೇಕಾಗುತ್ತದೆ."

- ಸುನೀಲ್​

ಹಳೇ ವಿದ್ಯಾರ್ಥಿ, ದೊಡ್ಡೂರು

" ಕಟ್ಟಡಗಳ ದುರಸ್ತಿಗೆ ಅನುದಾನ ಕೊರತೆ ಇದೆ. ನೂತನ ಕಟ್ಟಡಗಳ ನಿಮಾರ್ಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುದಾನ ಪಡೆಯಬೇಕು. ಸೋಮವಾರ ದೊಡ್ಡೂರು ಗ್ರಾಮದ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ."

- ಗುರುಮೂರ್ತಿ

ಬಿಇಒ, ಬಂಗಾರಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net