

ಅರಕಲಗೂಡು: ತಾಲೂಕಿನ ಕೊಣನೂರು ದೊಡ್ಡಕೆರೆ ಏರಿ ಎರಡು ವರ್ಷಗಳ ಹಿಂದೆಯೇ ಶಿಥಿಲಾವಸ್ಥೆ ತಲುಪಿದ್ದು, ಇದೀಗ ಮಳೆ ಅಬ್ಬರಕ್ಕೆ ದೊಡ್ಡ ಪ್ರಮಾಣದಲ್ಲಿ ಬಾಯ್ತೆರೆದು ಕುಸಿಯಲಾರಂಭಿಸಿದೆ.
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷೃದಿಂದಾಗಿ ದೊಡ್ಡಕೆರೆ ಏರಿ ರಸ್ತೆ ಅವಸಾನದ ಅಂಚಿನಲ್ಲಿದೆ ಎಂಬುದು ಸಾರ್ವಜನಿಕರ ಆರೋಪ. ಕೊಣನೂರು, ಕೆರೆಕೋಡಿ, ಹಂಡ್ರಂಗಿ ಹಾಗೂ ಮಲ್ಲಿಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿ ಇದಾಗಿದೆ. ಎರಡು ವರ್ಷಗಳ ಹಿಂದೆ ಸುರಿದ ಭಾರಿ ಮಳೆಗೆ ದೊಡ್ಡಕೆರೆ ಏರಿ ಶಿಥಿಲಗೊಂಡು ಕುಸಿಯಲಾರಂಭಿಸಿತ್ತು. ಈ ಕುರಿತು ಸ್ಥಳೀಯರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದು ದುರಸ್ತಿಗೆ ಒತ್ತಾಯಿಸಿದರು. ಆಗ ಏರಿ ಕುಸಿದ ಸ್ಥಳಕ್ಕೆ ಸಿಮೆಂಟ್ ಕಾಂಕ್ರೀಟ್ ಹಾಕಿ ತೇಪೆ ಹಚ್ಚುವ ಮೂಲಕ ನೆಪ ಮಾತ್ರಕ್ಕೆ ದುರಸ್ತಿ ಕಾರ್ಯ ಕೈಗೊಳ್ಳಲಾಯಿತೇ ಹೊರತು ಶಾಶ್ವತ ಪರಿಹಾರಕ್ಕೆ ಮುಂದಾಗಲಿಲ್ಲ. ಪರಿಣಾಮ ಈಗ ಸುರಿದ ಮಳೆಗೆ ಕೆರೆ ಏರಿ ಮೇಲಿನ ಡಾಂಬರು ದೊಡ್ಡ ಪ್ರಮಾಣದಲ್ಲಿ ಸೀಳಿ ಕುಸಿದು ಹಾನಿಗೀಡಾಗಿದೆ.
ಹಾರಂಗಿ ಮತ್ತು ಹೇಮಾವತಿ ನಾಲೆ ನೀರು ಒಟ್ಟಿಗೆ ಸೇರುವ ಸಂಗಮ ಈ ಕೆರೆಯಾಗಿದೆ. ಕೆರೆ ಏರಿ ಮಾರ್ಗವಾಗಿ ಕೊಣನೂರಿನಿಂದ ಕೆರೆಕೋಡಿ, ಹಂಡ್ರಂಗಿ, ಬೆಮ್ಮತ್ತಿ, ಕೊಡಗು ಜಿಲ್ಲೆ, ಮಲ್ಲಿಪಟ್ಟಣ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲಿದೆ. ಅಲ್ಲದೆ, ರಾಜ್ಯ ಹೆದ್ದಾರಿ ಕೆರೆ ಏರಿ ಮೇಲೆ ನಿರ್ಮಾಣವಾಗಿದ್ದು, ಏರಿ ಮೇಲೆ ರಸ್ತೆ ನಿರ್ಮಾಣವಾಗಿದೆಯಾದರೂ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಿಲ್ಲ. ಕೆರೆ ಏರಿ ಮೇಲಿನ ರಸ್ತೆ ಅಂದಾಜು ಒಂದು ಕಿಮೀ ದೂರವಿದ್ದು, ರಸ್ತೆ ವಿಸ್ತರಣೆ ಮಾಡುವಾಗ ಕಾಮಗಾರಿಯನ್ನು ವೈಜ್ಞಾನಿಕವಾಗಿ ಕೈಗೊಳ್ಳದ ಪರಿಣಾಮ ಕೆರೆಏರಿಯ ಮಧ್ಯಭಾಗದಲ್ಲಿನ ಸುಮಾರು 200 ಮೀಟರ್ ಡಾಂಬರ್ ರಸ್ತೆ ಈಗ ಮೂರು ಅಡಿಗೂ ಹೆಚ್ಚು ಕುಸಿತಕ್ಕೆ ಒಳಗಾಗಿದೆ.
ಕೆರೆ ಏರಿಯ ಒಂದು ಭಾಗದಲ್ಲಿ ಭಾರಿ ಪ್ರಮಾಣದ ನೀರಿದ್ದರೆ, ಮತ್ತೊಂದು ಕಡೆ ಅಡಕೆತೋಟ, ಭತ್ತದ ಬೆಳೆ ಕೈಗೊಳ್ಳುವ ಅಚ್ಚುಕಟ್ಟು ಪ್ರದೇಶವಿದೆ. ಏರಿ ಒಡೆದರೆ ಆಗುವ ಅನಾಹುತ ಅಷ್ಟಿಷ್ಟಲ್ಲ. ಕೆಳ ಭಾಗದ ಅಡಕೆ ತೋಟ ಹಾಗೂ ಸಾಗುವಳಿ ಅಚ್ಚುಕಟ್ಟಿನ ಅಪಾರ ಪ್ರಮಾಣದ ಭೂಮಿ ಕೊಚ್ಚಿ ಹೋಗಿ ಕೆರೆಯ ಅಸ್ತಿತ್ವಕ್ಕೆ ದೊಡ್ಡ ಗಂಡಾತರ ಬರಲಿದೆ. ಸದ್ಯಕ್ಕೆ ಲೋಕೋಪಯೋಗಿ ಹಾಗೂ ಹಾರಂಗಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಹೆಚ್ಚಿನ ನೀರನ್ನು ಹೊರಬಿಟ್ಟು ಕೆರೆಯ ನೀರಿನ ಪ್ರಮಾಣವನ್ನು ಕಡಿಮೆ ಮಾಡಿಕೊಂಡು ರಸ್ತೆ ಕುಸಿದಿರುವಷ್ಟು ಕಡೆ ಕೆರೆಗೆ ಹೊಸದಾಗಿ ಬಂಡನ್ನು ನಿರ್ಮಿಸಿ ನೀರಿನ ಒತ್ತಡ ರಸ್ತೆಗೆ ಹೆಚ್ಚು ಬಾರದಂತೆ ಕ್ರಮವಹಿಸಿದ್ದಾರೆ.
ಕೃಷಿಕರಿಗೆ ಸಂಕಷ್ಟ: ಕೆರೆ ಏರಿ ಹೆಚ್ಚು ಕುಸಿಯುತ್ತಿರುವುದನ್ನು ತಪ್ಪಿಸುವ ಸಲುವಾಗಿ ಕೆರೆಕೋಡಿ ಭಾಗದಲ್ಲಿ ಕೋಡಿಯನ್ನು ನಾಲ್ಕು ಅಡಿ ಮಟ್ಟಕ್ಕೆ ಇಳಿಸಿ ನೀರು ಹೊರ ಕಳುಹಿಸಲಾಗಿದೆ. ಹೀಗಾಗಿ, ಕೆರೆಯಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿದೆ. ಭತ್ತದ ಒಗ್ಗು ಹಾಕುತ್ತಿದ್ದು ರೈತರಿಗೆ ನೀರಿನ ಸಮಸ್ಯೆ ತಲೆದೋರಿದೆ. ನೀರಿಗೆ ತೊಂದರೆಯಾದರೆ ಭತ್ತದ ನಾಟಿಗೆ ಹಿನ್ನಡೆಯಾಗಲಿದೆ ಎಂಬುದು ರೈತರ ಆತಂಕಕ್ಕೂ ಕಾರಣವಾಗಿದೆ.
ಜೀವ ಕೈಯಲ್ಲಿ ಹಿಡಿದು ಸಂಚರಿಸುವ ದುಸ್ಥಿತಿ: ಕೊಣನೂರು ದೊಡ್ಡಕೆರೆ ಏರಿ ಮೇಲೆ ನಿತ್ಯ ಕೆಎಸ್‌ಆರ್‌ಟಿಸಿ ಬಸ್, ಕಾರುಗಳು, ನೂರಾರು ದ್ವಿಚಕ್ರ ವಾಹನಗಳು ಓಡಾಡುತ್ತವೆ. ಒಂದು ಕಡೆ ಕೆರೆ ಒಡಲು ಮತ್ತೊಂದು ಕಡೆ ಪ್ರಪಾತದ ಹಳ್ಳವಿದ್ದು ತಿರುವಿನಿಂದ ಕೂಡಿರುವ ರಸ್ತೆಯಲ್ಲಿ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ದುಸ್ಥಿತಿಯಿದೆ. ಇಷ್ಟಲ್ಲದೆ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ದೊಡ್ಡಕೆರೆ ಏರಿ ತೀರ ಕಿಷ್ಕಿಂಧೆಯಾಗಿದೆ. ಈ ರಸ್ತೆಯಲ್ಲಿಯೇ ದಶಕಗಳ ಕಾಲ ವಾಹನ ಸವಾರರ ಸಂಚಾರ ಸಾಗಿದೆ. ಇಷ್ಟಾದರೂ ಪ್ರಮುಖ ಮಾರ್ಗವಾಗಿರುವ ದೊಡ್ಡಕೆರೆ ಏರಿಯನ್ನು ವೈಜ್ಞಾನಿಕವಾಗಿ ವಿಸ್ತರಿಸಿ ಅಭಿವೃದ್ಧಿಪಡಿಸುವ ಗೋಜಿಗೆ ಯಾರೊಬ್ಬರೂ ಹೋಗಿಲ್ಲ.
ಇನ್ನೊಂದೆಡೆ ದುರ್ಗಮ ಹಾದಿಯಂತಿದ್ದ ಕೆರೆ ಏರಿ ಕಳೆದೆರಡು ವರ್ಷಗಳಿಂದ ಕುಸಿಯಲಾರಂಭಿಸಿದರೂ ಶಾಶ್ವತ ದುರಸ್ತಿಗೆ ಕ್ರಮ ಕೈಗೊಳ್ಳಲಿಲ್ಲ. ಮಳೆಗಾಲಕ್ಕೂ ಮುನ್ನವೇ ಎಚ್ಚೆತ್ತುಕೊಳ್ಳಬೇಕಿತ್ತು. ಮಳೆ ಮುಂದುವರಿದು ಶಿಥಿಲಗೊಂಡಿರುವ ಕೆರೆ ಏರಿ ಪೂರ್ತಿ ಕುಸಿದರೆ ಅಪಾರ ಹಾನಿ ಉಂಟಾಗಲಿದೆ.
ಕೊಣನೂರು ದೊಡ್ಡಕೆರೆ ಎರಡು ವರ್ಷಗಳ ಹಿಂದೆಯೇ ಕುಸಿಯಲಾರಂಭಿಸಿತ್ತು. ಅಂದೇ ಸರಿಯಾಗಿ ದುರಸ್ತಿ ಕಾರ್ಯ ಮಾಡಿದ್ದರೆ ಈಗ ಸಮಸ್ಯೆ ಎದುರಾಗುತ್ತಿರಲಿಲ್ಲ. ನೆಪಮಾತ್ರಕ್ಕೆ ಸಿಮೆಂಟ್ ಕಾಂಕ್ರೀಟ್ ಹಾಕಿ ತೇಪೆ ಹಾಕಲಾಗಿತ್ತು. ತಡೆಗೋಡೆ ನಿರ್ಮಿಸಿ ಕೆರೆ ಏರಿ ಕುಸಿಯುವುದನ್ನು ತಪ್ಪಿಸಬಹುದಿತ್ತು. ಅತಿವೃಷ್ಟಿಯಿಂದ ಜನರು ತೊಂದರೆಗೆ ಒಳಗಾಗಿದ್ದಾರೆ. ಆದರೆ ಶಾಸಕ ಎ.ಮಂಜು ಕೆರೆ ಏರಿ ಅಭಿವೃದ್ಧಿಪಡಿಸಲು ಪಾದಯಾತ್ರೆ ಮಾಡಿದ್ದರೆ ನಾವೂ ಸೇರಿಕೊಳ್ಳುತ್ತಿದ್ದೆವು. ಇಲ್ಲಿಯ ಸಮಸ್ಯೆ ಬದಿಗೊತ್ತಿ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡುತ್ತಿರುವುದು ಹಾಸ್ಯಾಸ್ಪದ.
ಇಸ್ಮಾಯಿಲ್ ವಾಸಿಂ, ಕೆಡಿಪಿ ಹಾಗೂ ಕೊಣನೂರು ಗ್ರಾಪಂ ಮಾಜಿ ಸದಸ್ಯ
ಕೊಣನೂರು ದೊಡ್ಡಕೆರೆ ಕುಸಿದಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಶಾಸಕರ ಮಾರ್ಗದರ್ಶನದಲ್ಲಿ, ಸರ್ಕಾರದ ಮಟ್ಟದಲ್ಲಿ ಶಾಶ್ವತವಾದ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.
ಗಿರೀಶ್ ಕಾರ್ಯಪಾಲಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ