ದೊಡ್ಡಶಿವಾರ ಶಾಲಾ ಶಿಕ್ಷಕಿ ರಾಧಮ್ಮ ಅಮಾನತು

radhama
Published on

ಕೋಲಾರ: ವಿದ್ಯಾರ್ಥಿಗಳೊಂದಿಗೆ ಅಸಭ್ಯ ವರ್ತನೆ, ಪಾಲಕರಿಗೆ ಅಗೌರವ ತೋರುತ್ತಿದ್ದ, ಶಿಕ್ಷಕಿ ಸಿ.ವೈ.ರಾಧಮ್ಮನನ್ನು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೃಷ್ಣಮೂರ್ತಿ ಅವರು ಅಮಾನತುಗೊಳಿಸಿದ್ದಾರೆ.

ಜಿಲ್ಲೆಯ ಮಾಲೂರು ತಾಲೂಕಿನ ದೊಟ್ಟಶಿವಾರ ಸರ್ಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕಿ ಸಿ.ವೈ.ರಾಧಮ್ಮ ಎಸ್ಸೆಸ್ಸೆಲ್ಸಿಯ ವಿದ್ಯಾರ್ಥಿನಿಯೊಬ್ಬರಿಗೆ ಅವಾಚ್ಯ ಪದಗಳಿಂದ ನಿಂದಿಸಿ ಮಾನಸಿಕ ತೊಂದರೆ ನೀಡಿದ್ದರು, ಜತೆಗೆ ಹಲ್ಲೆ ಮಾಡಿದ್ದರು.

ಈ ಬಗ್ಗೆ ವಿದ್ಯಾರ್ಥಿನಿಯ ಪಾಲಕರಿಗೆ ವಿಚಾರ ಗೊತ್ತಾಗಿ ವಿಚಾರಿಸಲು ಶಾಲೆಗೆ ಬಂದಿದ್ದ ವಿದ್ಯಾರ್ಥಿನಿಯ ತಾಯಿಯನ್ನು ಮನಸೋ ಇಚ್ಚೆ ಬೈದಿದ್ದರು. ಎಸ್​ಡಿಎಂಸಿ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು, ಬಿಇಒ ಹಾಗೂ ಪೊಲೀಸ್​ ಠಾಣೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಸಮಿತಿಯಲ್ಲಿ ಬಿಇಒ ಎಚ್​.ಎಸ್​.ಚಂದ್ರಕಲಾ, ಜಿಲ್ಲಾ ಉಪನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ಸಗೀರಾ ಅಂಜುಮ್​, ತಾಲೂಕಿನ ಕುಡಿಯನೂರು ಸರ್ಕಾರಿ ಪ್ರೌಢ ಶಾಲೆಯ ಮುಖ್ಯಶಿಕ್ಷಕಿ ಗಾಯತ್ರಮ್ಮ ಶಾಲೆಗೆ ಭೇಟಿ ನೀಡಿ ಆರೋಪಗಳ ಕುರಿತು ವಿಚಾರಣೆ ನಡೆಸಿದ್ದರು. ಆರೋಪಗಳು ಸಾಭೀತಾಗಿದ್ದು, ಇಲಾಖಾ ವಿಚಾರಣೆ ಕಾಯ್ದಿರಿಸಿ ಸದರಿಯವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ.

ಅಮಾನತ್ತಿನ ಅವಧಿಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮ 98 ರನ್ವಯ ಜೀವನಾಧಾರ ಭತ್ಯೆಗೆ ಅರ್ಹರಿರುತ್ತಾರೆ. ಸದರಿ ನೌಕರರು ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಡಬಾರದೆಂದು ಉಪ ನಿರ್ದೇಶಕ ಹಾಗೂ ಶಿಸ್ತು ಪ್ರಾಧಿಕಾರಿಗಳು ಶಾಲಾ ಶಿಕ್ಷಣ ಇಲಾಖೆಯ ಕೃಷ್ಣಮೂರ್ತಿ ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net