

ಕೊಪ್ಪಳ: ಸಂವಿಧಾನ, ಕಾನೂನು ಬಗ್ಗೆ ಮಾತನಾಡುವ ಸಿಎಂ ಸಿದ್ದರಾಮಯ್ಯ ತಮ್ಮ ವಿರುದ್ಧ ಪ್ರಕರಣ ದಾಖಲಾದ ನಂತರವೂ ಅಧಿಕಾರದಿಂದ ಇಳಿಯದೇ ಭಂಡತನ ಮೆರೆಯುತ್ತಿದ್ದಾರೆ. ತಾವು ಶುದ್ಧರಿದ್ದರೆ ರಾಜೀನಾಮೆ ನೀಡಿ ತನಿಖೆ ಎದುರಿಸಿ ನಿದೋಷಿ ಎಂದು ಆದಲ್ಲಿ ಮತ್ತೆ ಸಿಎಂ ಆಗಲಿ ಎಂದು ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಆಗ್ರಹಿಸಿದರು.
ಮೊದಲಿನಿಂದಲೂ ಮುಡಾ ಹಗರಣದಲ್ಲಿ ಸಿಎಂ, ಕಾಂಗ್ರೆಸ್ ತಮ್ಮದು ತಪ್ಪಿಲ್ಲ ಎನ್ನುತ್ತಿದ್ದಾರೆ. ನ್ಯಾಯಾಲಯ ಸಿಎಂ ಅರ್ಜಿ ವಜಾ ಮಾಡಿದೆ. ಜನಪ್ರತಿನಿಧಿಗಳ ನ್ಯಾಯಾಲಯ ಪ್ರಕರಣ ದಾಖಲಿಸಲು ಸೂಚಿಸಿದೆ. ಈಗ ಸೈಟ್ ವಾಪಸ್ ಕೊಟ್ಟಿದ್ದಾರೆ. ಏನೂ ತಪು$್ಪ ಮಾಡಿಲ್ಲದಿದ್ದರೆ ಯಾಕೆ ನ್ಯಾಯಾಲಯ ಪ್ರಕರಣ ದಾಖಲಿಸಲು ಸೂಚಿಸಿದೆ ? ಇಷ್ಟಾದರೂ ಸಿಎಂ ತಮ್ಮದು ತಪ್ಪಿಲ್ಲ ಎನ್ನುತ್ತಾರೆ. ಇವರ ಬಗ್ಗೆ ರಾಜ್ಯದ ಜನತೆಗೆ ಗೊತ್ತಾಗಿದೆ. ಸಮಾಜವಾದಿ ಎನ್ನುವ ಸಿಎಂ, ಹೂಬ್ಲೆ$ಟ್ ವಾಚ್ ಮರಳಿಸಿದರು, ಈಗ ಸೈಟ್ ವಾಪಸ್ ಕೊಟ್ಟಿದ್ದಾರೆ. ತಪು$್ಪಮಾಡದಿದ್ದರೆ ಯಾಕೆ ಕೊಟ್ಟರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಬಂದ ಸಂಕಷ್ಟ ಈಗ ಸಿದ್ದರಾಮಯ್ಯಗೆ ಬಂದಿದೆ. ಆಗ ರಾಜ್ಯಪಾಲರ ಪರವಾಗಿ ಮತ್ತು ಸಿಎಂ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಕಾನೂನು ಪಾಠ ಮಾಡಿದ್ದಾರೆ. ತಮಗೆ ಸಂಕಷ್ಟ ಬಂದಾಗ ರಾಜ್ಯಪಾಲರನ್ನು ಅವಮಾನಿಸಿ ಮಾತನಾಡುತ್ತಾರೆ. ಅವರ ದ್ವೀನಿತಿ ಜನರಿಗೆ ಗೊತ್ತಾಗಿದೆ. ಸಿಎಂ ಸ್ಥಾನದಲ್ಲಿದ್ದರೆ ನಿಷ್ಪಕ್ಷಪಾತ ತನಿಖೆ ನಡೆಯಲು ಹೇಗೆ ಸಾಧ್ಯ? ಲೋಕಾಯುಕ್ತ ಮುಚ್ಚಿಸಿ, ಎಸಿಬಿ ಜಾರಿ ಮಾಡಿದ್ದರು. ಈಗ ಅದೇ ಲೋಕಾಯುಕ್ತ ತನಿಖೆಗೆ ಸಿಕ್ಕಿಕೊಂಡಿದ್ದಾರೆಂದರು.
ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಭ್ರಷ್ಟಾಚಾರದಲ್ಲಿ ಮುಳುಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮ, ಮುಡಾ ಸೇರಿ ಅನೇಕ ಹಗರಣಗಳು ನಡೆದಿವೆ. ಸೈಟ್ ವಾಪಸ್ ಕೊಟ್ಟ ಮಾತ್ರಕ್ಕೆ ಅಪರಾಧ ಮುಗಿಯುವುದಿಲ್ಲ. ಬಿಜೆಪಿ ಸಿಎಂ ರಾಜೀನಾಮೆ ನೀಡುವವರೆಗೆ ವಿಶ್ರಮಿಸುವುದಿಲ್ಲ. ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್, ಮಾದ್ಯಮ ವಕ್ತಾರ ಸೋಮಶೇಖರ ಗೌಡ, ಮಾಧ್ಯಮ ಸಂಚಾಲಕ ಮಹೇಶ ಹಾದಿಮನಿ, ಪ್ರಸಾದ ಗಾಳಿ ಇದ್ದರು.