ದೊಡ್ಡಕೆರೆ ನೈರ್ಮಲ್ಯಕ್ಕೆ ಸಿರಿಗೆರೆ ಶ್ರೀಗಳ ಸಲಹೆ

131
Published on

ಭರಮಸಾಗರ : ದೊಡ್ಡಕೆರೆಯಲ್ಲಿ ಚರಂಡಿ ನೀರು, ಅಡಕೆ ಸಿಪ್ಪೆಯ ತ್ಯಾಜ್ಯ ಸೇರದಂತೆ ಎಚ್ಚರವಹಿಸಬೇಕು. ದೇವಾಲಯದಂತೆ ಕೆರೆಯನ್ನೂ ಪವಿತ್ರವಾಗಿ ಇರಿಸಬೇಕು ಎಂದು ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸತತ ಮಳೆ ಹಾಗೂ ಏತ ನೀರಾವರಿಯಿಂದಾಗಿ ಇಲ್ಲಿನ ಬಿಚ್ಚುಗತ್ತಿ ಭರಮಣ್ಣ ನಾಯಕ ಜೋಡಿಕೆರೆಗಳಿಗೆ ಹಳ್ಳದ ಮೂಲಕ ನೀರು ಹರಿದು, ಕೋಡಿ ಬಿದ್ದ ಹಿನ್ನೆಲೆಯಲ್ಲಿ ಕೆರೆಗಳಿಗೆ ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದರು.

ಕೆರೆ ನೀರು ಶುದ್ಧವಾಗಿಡಬೇಕು. ಚರಂಡಿ ಹಾಗೂ ಶೌಚನೀರಿಗೆ ಪ್ರತ್ಯೇಕ ಪೈಪ್‌ಲೈನ್ ಮೂಲಕ ಯುಜಿಡಿ ವ್ಯವಸ್ಥೆ ಮಾಡಬೇಕೆಂದು ಶಾಸಕರು, ಸ್ಥಳೀಯ ಆಡಳಿತದ ಮುಖಂಡರಿಗೆ ತಿಳಿಸಲಾಗಿದೆ ಎಂದರು. ಅಡಕೆ ಸಿಪ್ಪೆಯನ್ನು ಕೆರೆ, ರಸ್ತೆಗೆ ಎಸೆಯದಂತೆ ರೈತರಿಗೆ ಮನವರಿಕೆ ಮಾಡಲಾಗುವುದು. ಕೆರೆಯಲ್ಲಿ ಸಂಗ್ರಹವಾಗಿರುವ ಸಿಪ್ಪೆಯನ್ನು ಸಿರಿಗೆರೆ ಶಾಂತಿವನಕ್ಕೆ ಸಾಗಿಸಿ ಹೊಸ ಉದ್ದಿಮೆಯೊಂದಿಗೆ ಸದ್ಬಳಕೆಗಾಗಿ ಜಾಗೃತಿ ಮೂಡಿಸಲು 20 ಜನ ಸಮಿತಿ ರಚಿಸಲಾಗುವುದು. ವರ್ತಕರು ಇದಕ್ಕೆ ತಯಾರಾಗಬೇಕೆಂದು ಆಶಿಸಿದರು.

ದೊಡ್ಡಕೆರೆಯಲ್ಲಿ ಅಡಕೆ ಸಿಪ್ಪೆ ಸುರಿದ, ತ್ಯಾಜ್ಯ ಸೇರುತ್ತಿರುವ ಕಡೆ ನೀರು ಕಲುಷಿತವಾಗಿದ್ದು ಜಲಚರಗಳಿಗೆ ಮಾರಕವಾಗಲಿದೆ. ಇದು ಮುಂದುವರಿದರೆ ಪೂರ್ಣ ಕೆರೆಗೆ ಅಪಾಯವಿದೆ ಎಂದು ದಾವಣಗೆರೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ತಿಳಿಸಿದ್ದಾರೆ. ಹಾಗಾಗಿ ಕಾನೂನಿಗಿಂತ ಧರ್ಮದ ರೀತಿಯಲ್ಲಿ ತಿಳಿಹೇಳಿ ಅಡಕೆ ಸಿಪ್ಪೆ ತೆರವಿಗೆ ಪ್ರಯತ್ನಿಸಲಾಗುವುದು. ಕೆವಿಕೆ ಸಲಹೆಯಂತೆ ಗೊಬ್ಬರವಾಗಿ ಪರಿವರ್ತಿಸಲು ಕ್ರಮ ವಹಿಸಲಾಗುವುದು ಎಂದರು.

ಈ ವೇಳೆ ಶಾಸಕ ಎಂ.ಚಂದ್ರಪ್ಪ, ಮುಖಂಡರಾದ, ಡಿ.ಎಸ್.ಪ್ರವೀಣ್ ಕುಮಾರ್, ತೀರ್ಥಪ್ಪ, ಸಾಮಿಲ್ ಶಿವಣ್ಣ, ಶಶಿಪಾಟೀಲ್, ಶೈಲೇಶ್, ಕಲ್ಲೇಶ್, ಎಚ್.ಎನ್.ತಿಪ್ಪೇಸ್ವಾಮಿ, ಕೋಗುಂಡೆ ಮಂಜುನಾಥ್, ನಿವೃತ್ತ ನೀರಾವರಿ ನಿಗಮ ಎಂ.ಡಿ. ಮಲ್ಲಿಕಾರ್ಜುನ ಗುಂಗೆ, ನಿವೃತ್ತ ಪೋಲೀಸ್ ಡಿವೈಎಸ್ಪಿ ಜಗದೀಶ್, ಶಮೀಂಪಾಷಾ, ಶಾಂತಾ ಅಶೋಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net