

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
ಮಳೆಗಾಲ ಬಂತೆಂದರೆ ನಗರದ ಅಡವಿ ಆಂಜನೇಯ ಬಡಾವಣೆ ನಿವಾಸಿಗಳಲ್ಲಿ ನಡುಕ ಶುರುವಾಗುತ್ತದೆ. ಒಂದಷ್ಟು ದಿನ ನಗರ ಸಂಪರ್ಕ ಕಡಿದುಕೊಳ್ಳುವ ಭೀತಿಯೂ ಎದುರಾಗುತ್ತದೆ. ಇದಕ್ಕೆ ಕಾರಣ ನಗರದ ದೊಡ್ಡಕೆರೆ !
ಹೌದು, ನಗರದ ಅಡವಿ ಆಂಜನೇಯ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿದೆ ದೊಡ್ಡಕೆರೆ. ಮಳೆಗಾಲದ ಸಮಯದಲ್ಲಿ ಕೋಡಿ ಬೀಳುತ್ತಿದ್ದು, ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಮುಳುಗಿ ಹೋಗುತ್ತದೆ. ಇದರಿಂದ ನಿವಾಸಿಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಂದ ಈ ಸಮಸ್ಯೆ ಎದುರಾಗಿದೆ. ಈ ಸಮಯದಲ್ಲಿ ನಿವಾಸಿಗಳು ಅಕ್ಕಪಕ್ಕದ ಜಮೀನು ಅಥವಾ ಪರ್ಯಾಯ ಮಾರ್ಗವಾಗಿ ಸುತ್ತೂ ಬಳಸಿ ನಗರಕ್ಕೆ ಬರುವ ದುಸ್ಥಿತಿ ಎದುರಾಗುತ್ತಿದೆ. ಆದ್ದರಿಂದ ಕೆರೆಗೆ ಬ್ರಿಜ್ ಕಂ ಬ್ಯಾರೇಜ್ (ಬಾಂದಾರ) ನಿರ್ಮಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
ಈ ಹಿಂದೆ ಕೆರೆಗೆ ಗಂಗಾಜಲ ಕೋಡಿ ಆಂಜನೇಯ ಹಿರೇಕೆರೆ ಎಂದು ಕರೆಯಲಾಗುತ್ತಿತ್ತು. ಇತ್ತೀಚಿನ ದಿನದಲ್ಲಿ ದೊಡ್ಡಕೆರೆ ಎಂದು ಕರೆಯಲಾಗುತ್ತಿದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದು 259 ಎಕರೆ ವಿಸ್ತೀರ್ಣ ಹೊಂದಿದೆ.
ಅಡವಿ ಆಂಜನೇಯ ಬಡಾವಣೆಯಲ್ಲಿ 5 ಸಾವಿರಕ್ಕೂ ಅಧಿಕ ಜನ ವಾಸವಾಗಿದ್ದಾರೆ. ಅದರಲ್ಲಿ ಬಹುಪಾಲು ಜನ ಕೂಲಿ ಕಾರ್ಮಿಕರು, ಬುಡಕಟ್ಟು ಜನಾಂಗದವರು ಇದ್ದಾರೆ. ಈ ಪ್ರದೇಶ ನಗರದಿಂದ 3 ಕಿ.ಮೀ. ದೂರದಲ್ಲಿದೆ. ನಿವಾಸಿಗಳು ಜೀವನ ನಿರ್ವಹಣೆಗೆ ನಗರವನ್ನೇ ಅವಲಂಬಿಸಿದ್ದಾರೆ. ನಗರಕ್ಕೆ ಹೋಗಿ ಬರಲು ಕೆರೆ ಪಕ್ಕದ ರಸ್ತೆ ಬಳಸುವುದು ಅನಿವಾರ್ಯವಾಗಿದೆ. ಆದರೆ, ಕೆರೆಗೆ ಕೋಡಿ ಬಿದ್ದು ನೀರು ಹರಿಯುವ ಸಮಯದಲ್ಲಿ ನಿವಾಸಿಗಳು ಮನೆಯಲ್ಲಿಯೇ ಕಾಲ ಕಳೆಯಬೇಕಾಗುತ್ತದೆ.
ಕೆರೆಗೆ ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸುವ ಕುರಿತು ಮಾಜಿ ಶಾಸಕ ದಿ. ಜಿ. ಶಿವಣ್ಣ ಅವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ, ಆಗ ಕೆರೆಯ ಸುತ್ತಮುತ್ತಲಿನ ಜಮೀನಿನವರು ಯೋಜನೆಗೆ ಜಾಗ ನೀಡಲು ನಿರಾಕರಿಸಿದ್ದರಿಂದ ಅದು ನನೆಗುದಿಗೆ ಬಿದ್ದಿತ್ತು.
ಕಳೆದ ವರ್ಷ ಕೆರೆ ಭರ್ತಿಯಾಗಿ ರಸ್ತೆ ಸಂಪರ್ಕ ಕಡಿತಗೊಂಡ ಸಂದರ್ಭದಲ್ಲಿ ಭೇಟಿ ನೀಡಿದ್ದ ಹಿಂದಿನ ಶಾಸಕ ಅರುಣಕುಮಾರ ಪೂಜಾರ, ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಅದು ಯಾವುದೂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಎಂಬುದು ನಿವಾಸಿಗಳ ಆರೋಪವಾಗಿದೆ.
ದೊಡ್ಡಕೆರೆಗೆ ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸುವ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಅದನ್ನು ಆದಷ್ಟು ಬೇಗ ಸರ್ಕಾರದ ಗಮನಕ್ಕೆ ತಂದು ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸಲಾಗುವುದು.ಪ್ರಕಾಶ ಕೋಳಿವಾಡ, ಶಾಸಕ ರಾಣೆಬೆನ್ನೂರ ನಾವು ನಿತ್ಯವೂ ನಗರಕ್ಕೆ ತೆರಳಿ ಕೆಲಸ ಮಾಡಿದಲ್ಲಿ ಮಾತ್ರ ಜೀವನ ಸಾಗಿಸಬಹುದು. ಆದರೆ, ಮಳೆಗಾಲದ ಸಮಯದಲ್ಲಿ ಕೆರೆ ಭರ್ತಿಯಾದಲ್ಲಿ ನಮ್ಮ ಪ್ರದೇಶದಿಂದ ನಗರಕ್ಕೆ ಹೋಗಿ ಬರಲಾಗುವುದಿಲ್ಲ. ಆದ್ದರಿಂದ ಸರ್ಕಾರ ಕೆರೆಗೆ ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸಿ ಸಮಸ್ಯೆಗೆ ಪರಿಹಾರ ಒದಗಿಸಬೇಕು.ನೀಲಮ್ಮ ಕಿಳ್ಳಿಕ್ಯಾತರ, ಅಡವಿ ಆಂಜನೇಯ ಬಡಾವಣೆ ನಿವಾಸಿ