

ಮಂಡ್ಯ: ತಾಲೂಕಿನ ಹೊಳಲು ಗ್ರಾಮದ ದೊಡ್ಡಯ್ಯ ಸ್ವಾಮಿ ದೇವಸ್ಥಾನದ ಬಸವ ಅನಾರೋಗ್ಯದಿಂದ ನಿಧನವಾಗಿದೆ.
ಸುಮಾರು 18 ವರ್ಷದಿಂದ ಭಕ್ತರು ಬಸವನಿಗೆ ಪೂಜೆ ಸಲ್ಲಿಸುತ್ತಿದ್ದು, ಜನರ ಪ್ರೀತಿಗೆ ಪಾತ್ರವಾಗಿತ್ತು. ಆದರೆ ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿ ದುರಾದೃಷ್ಟವಶಾತ್ ಮೃತಪಟ್ಟಿದೆ.
ಮೃತ ಬಸವನ ಮೃತದೇಹವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಟ್ರಾೃಕ್ಟರ್ ಹಾಗೂ ಬಸವನಿಗೆ ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಚಿಕ್ಕತಮ್ಮನಹಳ್ಳಿ ಗ್ರಾಮದ ದೇವರ ಗುಡ್ಡಪ್ಪಗಳು ಪೂಜಾ ವಿಧಿವಿಧಾನ ನೆರವೇರಿಸಿದರು. ದೊಡ್ಡಯ್ಯಸ್ವಾಮಿ ದೇವಸ್ಥಾನದ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಮಾಜಿ ಶಾಸಕ ಎಚ್.ಬಿ.ರಾಮು, ರಾಜ್ಯ ಒಕ್ಕಲಿಗ ಸಂಘದ ಮಾಜಿ ಉಪಾಧ್ಯಕ್ಷ ಎಚ್.ಎಲ್.ಶಿವಣ್ಣ, ಮುಖಂಡರಾದ ಎಚ್.ಸಿ.ಹರಿಪ್ರಸಾದ್, ವಿಜಯಕುಮಾರ್, ದೊಡ್ಡಯ್ಯಸ್ವಾಮಿ ದೇವಸ್ಥಾನದ ಪದಾಧಿಕಾರಿಗಳಾದ ಶಂಕರ್ ಪೂಜಾರಿ, ಸದಾನಂದ, ತಮ್ಮಣ್ಣ ಸೇರಿದಂತೆ ವಿವಿಧ ಗ್ರಾಮದ ಜನರು ಬಸವನ ಅಂತಿಮ ದರ್ಶನ ಪಡೆದರು.