

ಮಂಡ್ಯ: ಪಾಂಡವಪುರ ತಾಲೂಕು ದೊಡ್ಡಬ್ಯಾಡರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರಸಗೊಬ್ಬರ ಪೂರೈಕೆ ಮಾಡುವಂತೆ ಒತ್ತಾಯಿಸಿ ಆಡಳಿತ ಮಂಡಳಿಯಿಂದ ನಗರದಲ್ಲಿ ಕರ್ನಾಟಕ ರಾಜ್ಯ ಸಹಕಾರಿ ಮಾರುಕಟ್ಟೆ ಒಕ್ಕೂಟ(ಕೆಎಸ್‌ಸಿಎಂಎಫ್)ಕ್ಕೆ ಮನವಿ ಸಲ್ಲಿಸಲಾಯಿತು.
ಸೊಸೈಟಿಯ ಹಿಂದಿನ ಆಡಳಿತ ಮಂಡಳಿ ಸರಿಯಾಗಿ ಸೊಸೈಟಿಗೆ ರಸಗೊಬ್ಬರ ಸರಬರಾಜು ಮಾಡಿಕೊಳ್ಳದ ಪರಿಣಾಮ ಇಂದು ರೈತರಿಗೆ ದೊಡ್ಡಮಟ್ಟದಲ್ಲಿ ಸಮಸ್ಯೆಯಾಗಿದೆ. ಕೃಷಿ ಚಟುವಟಿಕೆ ನಡೆಯುತ್ತಿರುವುದರಿಂದ ಯೂರಿಯಾ ರಸಗೊಬ್ಬರ ಕೊಡುವಂತೆ ಕೇಳುತ್ತಿದ್ದಾರೆ. ಆದರೆ ಅವರಿಗೆ ವಿತರಿಸಲು ರಸಗೊಬ್ಬರವಿಲ್ಲ. ಇದರಿಂದಾಗಿ ರೈತರು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯೂರಿಯಾ ವಿತರಣೆ ಮಾಡಲು ಸಾಧ್ಯವಾಗದಿದ್ದರೆ ಸೊಸೈಟಿಗೆ ಬೀಗ ಹಾಕಿಕೊಂಡು ಹೋಗುವಂತೆ ಹೇಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೊಸೈಟಿಗೆ ಯೂರಿಯಾ ರಸಗೊಬ್ಬರ ಸರಬರಾಜು ಮಾಡಬೇಕೆಂದು ಒತ್ತಾಯಿಸಿದರು.
ಸೊಸೈಟಿ ಅಧ್ಯಕ್ಷ ಧರ್ಮ, ಸುರೇಶ್, ಶಂಕರೇಗೌಡ, ಕೃಷ್ಣ ಇತರರಿದ್ದರು.