

ವಿಜಯವಾಣಿ ಸುದ್ದಿಜಾಲ ತ್ಯಾಮಗೊಂಡ್ಲು
ಹೋಬಳಿಯ ದೊಡ್ಡಬೆಲೆ ಗ್ರಾಪಂ ಅಧ್ಯಕ್ಷರಾಗಿ ದೇವರಾಜು, ಉಪಾಧ್ಯಕ್ಷರಾಗಿ ಸೌಭಾಗ್ಯಾ ಆಯ್ಕೆಯಾದರು.
14 ಸದಸ್ಯರ ಬಲದ ದೊಡ್ಡಬೆಲೆ ಗ್ರಾಪಂನಲ್ಲಿ ಚುನಾವಣಾ ಪ್ರಕ್ರಿಯೆಯಲ್ಲಿ ಎಸ್‌ಸಿ ವರ್ಗಕ್ಕೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ದೊಡ್ಡಚನೋಹಳ್ಳಿ ವಾರ್ಡ್‌ನ ದೇವರಾಜು, ಸಾಮಾನ್ಯ ಮಹಿಳೆಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಇಸುವನಹಳ್ಳಿ ವಾರ್ಡ್‌ನ ಸೌಭಾಗ್ಯಾ ಮಾತ್ರ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ಎಂದು ಚುನಾವಣಾಧಿಕಾರಿ, ನೆಲಮಂಗಲ ವಿಭಾಗದ ಪಂಚಾಯತ್‌ರಾಜ್ ಇಂಜನಿಯರಿಂಗ್ ಇಲಾಖೆಯ ಎಇಇ ಎಂ.ಟಿ.ಅರುಣಾಚಲ ಶುಕ್ರವಾರ ಘೋಷಿಸಿದರು.
ಮಾಜಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮಾತನಾಡಿ, ತಾಲೂಕಿನಲ್ಲಿ ಬೇರುಮಟ್ಟದಲ್ಲಿ ಜೆಡಿಎಸ್ ಭದ್ರವಾಗಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿಯಿಂದ ನಮಗೆ ಹೊಡೆತ ಬಿದ್ದಿದೆ. ಗ್ರಾಪಂಗಳಲ್ಲಿ ವಾಮ ಮಾರ್ಗದಿಂದ ಕಾಂಗ್ರೆಸ್ ಬೆಂಬಲಿತರು ಅಧಿಕಾರ ಹಿಡಿಯಲು ಹೊಂಚು ಹಾಕಿದ್ದರು. ಆದರೆ, ನಮ್ಮ ಅಭ್ಯರ್ಥಿಗಳು ಒಗ್ಗಟ್ಟಾಗಿದ್ದು, ಅವರ ಯಾವುದೇ ತಂತ್ರ ಫಲಿಸಿಲ್ಲ ಎಂದರು.
ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಕಾರೇಹಳ್ಳಿ ಗುರುಪ್ರಕಾಶ್ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ನಾವು ಸೋತಿರಬಹುದು. ಆದರೆ, ವಿಶ್ವಾಸ ಕಳೆದುಕೊಂಡಿಲ್ಲ. ಆದರೆ ಕೊಡಿಗೇಹಳ್ಳಿ ಗ್ರಾಪಂ ಚುನಾವಣೆಯಲ್ಲಿ ಸಂಬಂಧಪಡದ ಅಧಿಕಾರಿಗಳನ್ನು ಚುನಾವಣೆಗೆ ಬಳಸಿ ನಮಗೆ ಮೋಸ ಮಾಡಲಾಗಿದೆ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದೇವೆ ಎಂದರು.
ಗ್ರಾಪಂ ಸದಸ್ಯರಾದ ಜಿ.ಕೃಷ್ಣಪ್ಪ, ರಾಮಕೃಷ್ಣಯ್ಯ, ಎ.ಮಂಜುನಾಥ್, ಶ್ರೀಶೈಲಾ, ನಾಗೇಶ್, ಎಚ್.ಮಂಜುನಾಥ್, ಮಂಗಳಮ್ಮ, ಮುಖಂಡರಾದ ಪುಟ್ಟಸ್ವಾಮಿ, ಲೋಕೇಶ್, ಭೋಜರಾಜು, ಚಂದ್ರಣ್ಣ, ಯೋಗೇಶ್, ರಾಜಣ್ಣ, ನರಸಾಪುರ ಮಂಜುನಾಥ್, ಹತ್ತುಕುಂಟೆಪಾಳ್ಯ ಮೂರ್ತಿ, ನಟರಾಜು, ಹರಿಣಿ ಎ.ಎಸ್., ಮಾಲತಿ ಜಿ.ಆರ್., ಪಿಡಿಒ ಗಂಗಾಧರ್, ಕಾರ್ಯದರ್ಶಿ ಡಿ.ಪಾರ್ಥಸಾರಥಿ, ಕರ ವಸೂಲಿಗಾರ ಮಂಜುನಾಥ್ ಇದ್ದರು.