ಸ್ಥಳ ಪರಿಶೀಲನೆಗೆ ಅಧಿಕಾರಿಗಳ ಭರವಸೆ

highway issu
doddabelavangala highway work issu
Published on

ದೊಡ್ಡಬೆಳವಂಗಲ ಹೆದ್ದಾರಿ ಕಾಮಗಾರಿ ವಿವಾದ

ಅಂಡರ್‌ಪಾಸ್ ನಿರ್ಮಾಣಕ್ಕೆ ಆಗ್ರಹ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೊಡ್ಡಬಳ್ಳಾಪುರ ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾಗಿರುವ ದೊಡ್ಡಬೆಳವಂಗಲ ಭಾಗದಲ್ಲಿ ಹೆದ್ದಾರಿ ಕಾಮಗಾರಿ ಚುರುಕು ಪಡೆದಿರುವ ನಡುವೆಯೇ ಈ ಭಾಗದಲ್ಲಿ ಜನ, ಜಾನುವಾರು, ವಾಹನಗಳ ಸಂಚಾರಕ್ಕೆ ಮೇಲ್ಸೇತುವೆ ನಿರ್ಮಿಸಬೇಕೆಂಬ ಗ್ರಾಮಸ್ಥರ ಒತ್ತಾಯಕ್ಕೆ ಮಣಿದಿರುವ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಭರವಸೆ ನೀಡಿದ್ದಾರೆ.
ದೊಡ್ಡಬೆಳವಂಗಲ ಬಸ್ ನಿಲ್ದಾಣದ ಬಳಿ ಜಮಾವಣೆಯಾದ ಗ್ರಾಮಸ್ಥರು ಸಾಂಕೇತಿಕ ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪ್ರಾಧಿಕಾರದ ಅಧಿಕಾರಿಗಳು, ಗ್ರಾಮಸ್ಥರ ಮನವಿ ಸ್ವೀಕರಿಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.

ಮೇಲ್ಸೇತುವೆ ಬದಲು ಅಂಡರ್‌ಪಾಸ್: ದಾಬಸ್‌ಪೇಟೆ-ಹೊಸಕೋಟೆ ಹೆದ್ದಾರಿ ಹಾದುಹೋಗುವ ಈ ಭಾಗದಲ್ಲಿ ನಿಯಮಾವಳಿಯಂತೆ ಮೇಲ್ಸೇತುವೆ ನಿರ್ಮಾಣಕ್ಕೆ ಅನುಮತಿ ಇಲ್ಲ ಎನ್ನಲಾಗಿದ್ದು, ಪರ್ಯಾಯವಾಗಿ ಅಂಡರ್‌ಪಾಸ್ ನಿರ್ಮಾಣ ಮಾಡುವ ಭರವಸೆ ವ್ಯಕ್ತವಾಗಿದೆ. ಪ್ರಮುಖವಾಗಿ ದೊಡ್ಡಬೆಳವಂಗಲ ಬಸ್ ನಿಲ್ದಾಣದ ಬಳಿ ಕಡ್ಡಾಯವಾಗಿ ಅಂಡರ್‌ಪಾಸ್ ನಿರ್ಮಿಸಬೇಕೆಂಬ ಒತ್ತಡ ಹೆಚ್ಚಿದೆ. ಹಾಗೆಯೇ, ಕರ್ನಾಟಕ ಪಬ್ಲಿಕ್ ಶಾಲೆ ಬಳಿ ಅಂಡರ್‌ಪಾಸ್ ಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈಗಾಗಲೇ ಈ ಭಾಗದ ಸುಮಾರು 2 ಕಿಮೀ ಅಂತರದಲ್ಲಿ ಅಂಡರ್‌ಪಾಸ್ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಇದರ ಜತೆಗೆ ಇನ್ನೆರಡು ಅಂಡರ್‌ಪಾಸ್‌ಗಳು ನಿರ್ಮಾಣವಾಗಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಮಾಜಿ ಶಾಸಕರ ಸಭೆ: ವೆಂಕಟರಮಣಯ್ಯ ಶಾಸಕರಾಗಿದ್ದ ವೇಳೆ ಯೋಜನೆ ಅಧಿಕಾರಿಗಳೊಂದಿಗೆ ಅಂಡರ್‌ಪಾಸ್ ನಿರ್ಮಾಣದ ಬಗ್ಗೆ ಚರ್ಚೆ ನಡೆಸಿದ್ದರು. ಆದರೆ ದೂರದಲ್ಲಿ ಅಂಡರ್‌ಪಾಸ್ ನಿರ್ಮಿಸುತ್ತಿರುವುದರಿಂದ ಗ್ರಾಮಸ್ಥರು ಹೆದ್ದಾರಿ ದಾಟಲು ಕಿಮೀಗಟ್ಟಲೆ ಸುತ್ತಬೇಕಾಗುತ್ತದೆೆ. ಇದರಿಂದ ಕೃಷಿ ಚಟುವಟಿಕೆ, ಹೈನುಗಾರಿಕೆಗೆ ಪೆಟ್ಟುಬೀಳಲಿದೆ ಎಂಬ ಸಂಕಷ್ಟ ತೋಡಿಕೊಂಡಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಮುಂದಿನ ವಾರದೊಳಗೆ ಸ್ಥಳಕ್ಕೆ ಭೇಟಿ ನೀಡಿ ಸಾಧಕ ಬಾಧಕಗಳ ಪರಿಶೀಲನೆ ಬಳಿಕ ಮುಂದಿನ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಗ್ರಾಮದ ಮುಖಂಡರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.


ಮೂರು ವರ್ಷದ ಹಿಂದೆ ಈ ಭಾಗದಲ್ಲಿ ಅಂಡರ್‌ಪಾಸ್ ನಿರ್ಮಾಣದ ಪ್ರಸ್ತಾವನೆ ಇತ್ತು. ಈ ಹಿಂದಿನ ಶಾಸಕ ವೆಂಕಟರಮಣಯ್ಯ ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದರು. ಪ್ರಸ್ತುತ ಹೆದ್ದಾರಿ ನೀಲಿನಕ್ಷೆಯಲ್ಲಿ ಅಂಡರ್‌ಪಾಸ್ ನಿರ್ಮಾಣದ ಮಾಹಿತಿ ಇಲ್ಲವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿ ಅವರಿಗೂ ಮನವಿ ಪತ್ರ ಸಲ್ಲಿಸಲಾಗಿದೆ.
ಶಶಿಧರ್, ತಾಪಂ ಮಾಜಿ ಸದಸ್ಯ

ದೊಡ್ಡಬೆಳವಂಗಲ ತಾಲೂಕಿನಲ್ಲೇ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ, 2 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇಲ್ಲಿನ ಬಸ್ ನಿಲ್ದಾಣದಲ್ಲಿ ಅಂಡರ್‌ಪಾಸ್ ನಿರ್ಮಾಣವಾಗದಿದ್ದರೆ ಗ್ರಾಮ ವಿಭಜನೆಯಾಗುವುದಲ್ಲದೆ ವಾಣಿಜ್ಯ ಚಟುವಟಿಕೆಗಳಿಗೆ ಹಾಗೂ ಕೃಷಿ ಚಟುವಟಿಕೆಗಳಿಗೆ ದೊಡ್ಡ ಪೆಟ್ಟು ಬೀಳಲಿದೆ.
ರಾಮನಾಥ್, ಸ್ಥಳೀಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net