4 ವರ್ಷದಿಂದ ಉದ್ಘಾಟನೆ ಭಾಗ್ಯ ಕಾಣದ ಉಪತಹಸೀಲ್ದಾರ್ ಕಚೇರಿ ಕಟ್ಟಡ: ಪುಂಡರ ಅಡ್ಡೆಯಾದ ಸರ್ಕಾರಿ ಸ್ವತ್ತು

1
ತೂಬಗೆರೆಯಲ್ಲಿನ ಉಪತಹಸೀಲ್ದಾರ್ ಕಚೇರಿ ಕಟ್ಟಡ.
Published on

> ಶಿವೂ ತೂಬಗೆರೆ
ಇಲ್ಲಿನ ಸರ್ಕಾರಿ ಕಟ್ಟಡಕ್ಕೆ ಬರೋಬ್ಬರಿ 4 ವರ್ಷ ಕಳೆದರೂ ಉದ್ಘಾಟನೆ ಭಾಗ್ಯ ದೊರಕಿಲ್ಲ. ಅದೂ ಅಲ್ಲದೆ ಉದ್ಘಾಟನೆಗೆ ಮುನ್ನವೇ ಕಟ್ಟಡ ಕಳಾಹೀನಗೊಳ್ಳುತ್ತಿದ್ದು, ಸಾರ್ವಜನಿಕರ ತೆರಿಗೆ ಹಣವನ್ನು ಅಧಿಕಾರಿಗಳು ಹೇಗೆಲ್ಲ ಮಣ್ಣುಪಾಲು ಮಾಡುತ್ತಾರೆ ಎಂಬುದಕ್ಕೆ ಉಪತಹಸೀಲ್ದಾರ್ ಕಚೇರಿ ಸಾಕ್ಷಿಯಾಗಿದೆ.


ದೊಡ್ಡಬಳ್ಳಾಪುರ ತಾಲೂಕು ತೂಬಗೆರೆಯಲ್ಲಿ ನಿರ್ಮಿತಿ ಕೇಂದ್ರದಿಂದ 4 ವರ್ಷದ ಹಿಂದೆ ನಿರ್ಮಾಣವಾದ ಉಪ ತಹಸೀಲ್ದಾರ್ ಕಚೇರಿ ಉದ್ಘಾಟನೆಯಾಗಿಲ್ಲ. ನಿರ್ಮಿತಿ ಕೇಂದ್ರ ಕಾಮಗಾರಿ ಪೂರ್ಣಗೊಳಿಸಿ ಕಟ್ಟಡವನ್ನು ಇಲಾಖೆಗೆ ಹಸ್ತಾಂತರಿಸಿದೆ. ಆದರೆ ಕಚೇರಿ ಆರಂಭಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಇಚ್ಛಾಶಕ್ತಿ ಇಲ್ಲವಾಗಿದೆ. ನಾಲ್ಕು ವರ್ಷದಿಂದ ಬೀಗ ಹಾಕಿರುವ ಕಟ್ಟಡದ ಕೆಲವು ಭಾಗ ಶಿಥಿಲಗೊಂಡಿದ್ದು, ಕಳಪೆ ಕಾಮಗಾರಿಯನ್ನು ಬೊಟ್ಟು ಮಾಡಿ ತೋರಿಸುತ್ತಿದೆ. ಉದ್ಘಾಟನೆಗೆ ಮುನ್ನವೇ ಕಟ್ಟಡಕ್ಕೆ ಇಂಥ ದುಸ್ಥಿತಿ ಬಂದಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಕಾರಣವಾಗಿದೆ. ಕಟ್ಟಡ ಉದ್ಘಾಟನೆ ಮಾಡುತ್ತೇವೆ ಎನ್ನುತ್ತಲೇ ಇರುವ ಅಧಿಕಾರಿಗಳು ಕೆಲ ದಿನಗಳ ಹಿಂದೆ ಸ್ವಚ್ಛತಾ ಕಾರ್ಯ ನಡೆಸಿದ್ದರೂ ಬಳಿಕ ಮೌನಕ್ಕೆ ಜಾರಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪುಂಡರ ಅಡ್ಡೆ: ಸರ್ವೇ ನಂ.78 ರಲ್ಲಿ 23 ಗುಂಟೆ ಸರ್ಕಾರಿ ಜಮೀನಿದ್ದು ಇದರಲ್ಲಿ 15 ಗುಂಟೆ ನಾಡಕಚೇರಿ, 4 ಗುಂಟೆ ಕಚೇರಿ ವಸತಿಗೃಹ, 4 ಗುಂಟೆ ಗ್ರಾಮ ಲೆಕ್ಕಾಧಿಕಾರಿ ಕಚೇರಿ ಮತ್ತು ವಸತಿಗೃಹ ಎಂದು ವಿಂಗಡಿಸಲಾಗಿದೆ, ಆದರೆ ಈ ಕಟ್ಟಡ ಪುಂಡರಿಗೆ ಮೋಜು-ಮಸ್ತಿ ಮಾಡಲು ಪ್ರಶಸ್ತ ತಾಣವಾಗಿ ಮಾರ್ಪಾಡಾಗಿದೆ.

ಅಧಿಕಾರಿಗಳ ಹಿಂದೇಟು: 6 ವರ್ಷಗಳಿಂದ ಉಪ ತಹಸೀಲ್ದಾರ್ ಕಚೇರಿ, ನಾಡಕಚೇರಿ ಕಾರ್ಯ ಸರ್ಕಾರಿ ಪ್ರೌಢಶಾಲೆ ಕೊಠಡಿಗಳಲ್ಲಿ ನಡೆಯುತ್ತಿದೆ. ಕಿಷ್ಕಿಂದೆಯಂಥ ಕೊಠಡಿಯಲ್ಲಿ ಕರ್ತವ್ಯ ನಿರ್ವಹಿಸಲು ಸಿಬ್ಬಂದಿ ಪರದಾಡುತ್ತಿದ್ದಾರೆ. ಆದರೆ ಹೊಸ ಕಟ್ಟಡಕ್ಕೆ ಕಚೇರಿ ಸ್ಥಳಾಂತರಿಸಲು ಹಿರಿಯ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.


ಕಟ್ಟಡ ಉದ್ಘಾಟನೆಗೆ ವಿದ್ಯುತ್ ಸಂಪರ್ಕದ ತೊಂದರೆ ಇದೆ, ಆದ್ದರಿಂದ ತಡವಾಗುತ್ತಿದೆ, ಈ ಬಗ್ಗೆ ಸಂಬಂಧಪಟ್ಟಂತೆ ಕ್ರಮಕ್ಕೆ ಮುಂದಾಗಲಾಗಿದೆ, ವಿದ್ಯುತ್ ಸಂಪರ್ಕ ದೊರೆತ ಕೂಡಲೇ ಉದ್ಘಾಟನೆಗೆ ಕ್ರಮಕೈಗೊಳ್ಳಲಾಗುವುದು.

| ವೆಂಕಟೇಶ್‌ಮೂರ್ತಿ ಉಪತಹಸೀಲ್ದಾರ್

ಕಟ್ಟಡ ನಿರ್ಮಾಣವಾಗಿ ಅದರ ಕಾರ್ಯಾರಂಭ ಮಾಡಲು ಬರೋಬ್ಬರಿ 4 ವರ್ಷ ಕಳೆದರೂ ಸಾಧ್ಯವಾಗಿಲ್ಲ ಎಂದರೆ ನಿಜಕ್ಕೂ ಸ್ಥಳೀಯ ಆಡಳಿತದ ನಿರ್ಲಕ್ಷ್ಯವೇ ಕಾರಣ. ಜನರ ತೆರಿಗೆ ಹಣವನ್ನು ಮಣ್ಣುಪಾಲು ಮಾಡುತ್ತಿರುವುದು ಸರಿಯಲ್ಲ. ಕೂಡಲೇ ಕಟ್ಟಡ ಉದ್ಘಾಟನೆ ಮಾಡಿ ಕಚೇರಿ ಕಾರ್ಯಾರಂಭವಾಗಬೇಕು.
| ಎನ್.ಅರವಿಂದ್ ಜಿಪಂ ಮಾಜಿ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net