ಆಂಧ್ರ ಬಸ್ ಸಿಬ್ಬಂದಿ ವಿರುದ್ಧ ಪ್ರಯಾಣಿಕರು ಗರಂ: ದೊಡ್ಡಬಳ್ಳಾಪುರದಲ್ಲಿ ಮಧ್ಯರಾತ್ರಿ ಪ್ರತಿಭಟನೆ

2
ದೊಡ್ಡಬಳ್ಳಾಪುರದ ಡಿ.ಕ್ರಾಸಿನಲ್ಲಿ ಪ್ರಯಾಣಿಕರು ಆಂದ್ರ ಬಸ್ ತಡೆದು ಶನಿವಾರ ಪ್ರತಿಭಟಿಸಿದರು.
Published on

ದೊಡ್ಡಬಳ್ಳಾಪುರ: ಮೆಜೆಸ್ಟಿಕ್‌ನಿಂದ ಪ್ರತಿದಿನ ರಾತ್ರಿ 10.30ಕ್ಕೆ ಆಂಧ್ರ ಪ್ರದೇಶದ ರಾಯದುರ್ಗಂಗೆ ಹೊರಡುವ ಬಸ್‌ನಲ್ಲಿ ತಾಲೂಕಿನ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಬಸ್ ಸಿಬ್ಬಂದಿ ನಿರಾಕರಿಸಿದರು ಎಂಬ ಆರೋಪದ ಹಿನ್ನೆಲೆಯಲ್ಲಿ ಶನಿವಾರ ಮಧ್ಯರಾತಿ ಡಿ.ಕ್ರಾಸ್ ಬಳಿ ಬಸ್ ತಡೆದು ಪ್ರಯಾಣಿಕರು ಪ್ರತಿಭಟನೆ ನಡೆಸಿದ್ದಾರೆ.
ಪ್ರಕರಣ ಠಾಣೆ ಮೆಟ್ಟಿಲೇರಿ ಪೊಲೀಸರ ಮಧ್ಯೆ ಪ್ರವೇಶದ ಬಳಿಕ ಬಸ್ ಚಾಲಕ ಹಾಗೂ ನಿರ್ವಾಹಕ ಪ್ರಯಾಣಿಕರ ಕ್ಷಮೆ ಕೇಳಿದ ಬಳಿಕ ಪ್ರಕರಣ ಸುಖಾಂತ್ಯಗೊಂಡಿದೆ.

ಏನಿದು ಪ್ರಕರಣ: ದೊಡ್ಡಬಳ್ಳಾಪುರ, ಗೌರಿಬಿದನೂರು ಪ್ರಯಾಣಿಕರು ಪ್ರತಿದಿನ ರಾತ್ರಿ ಮೆಜೆಸ್ಟಿಕ್‌ನಿಂದ ಇದೇ ಬಸ್ ಮೂಲಕ ತಾಲೂಕು ಪ್ರವೇಶಿಸುತ್ತಾರೆ. ಆದರೆ ಪ್ರತಿದಿನ ಬಸ್ ಸಿಬ್ಬಂದಿ ಈ ಭಾಗದ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ತಕರಾರು ಮಾಡುತ್ತಿದ್ದರು ಎನ್ನಲಾಗಿದೆ, ಅದೇ ರೀತಿ ಆ.6ರಂದು ರಾತ್ರಿ ಬಸ್ ಹತ್ತಲು ಬಂದ ತಾಲೂಕಿನ ಪ್ರಯಾಣಿಕರೊಂದಿಗೆ ಸಿಬ್ಬಂದಿ ತರಕಾರು ಮಾಡಿದ್ದಾರೆ. ಕೆಲವು ಪ್ರಯಾಣಿಕರು ಜಗಳ ಮಾಡಿ ಕಡೆಗೂ ಬಸ್ ಏರಿದ್ದಾರೆ. ಈ ವೇಳೆ ಪ್ರಯಾಣಿಕರು ಹಾಗೂ ಬಸ್ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು ತಾಲೂಕಿನ ಡಿ.ಕ್ರಾಸ್‌ಗೆ ಬರುತ್ತಿದ್ದಂತೆ ಬಸ್‌ನಿಂದ ಇಳಿದು ಬಳಿಕ ಅದೇ ಬಸ್ ತಡೆದು ಕೆಲಕಾಲ ಪ್ರತಿಭಟನೆ ನಡೆಸಿದ್ದಾರೆ.

ಪೊಲೀಸರ ನಿರ್ಲಕ್ಷ್ಯಕ್ಕೆ ಕಿಡಿ: ಬಸ್ ತಡೆದು ಪ್ರತಿಭಟನೆ ನಡೆಸುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ನಗರ ಠಾಣೆ ಪೊಲೀಸರು ಬಸ್ ಸಿಬ್ಬಂದಿ ಪರವಾಗಿಯೇ ವಕಾಲತ್ತು ವಹಿಸಿದರು ಎಂಬ ಕಾರಣಕ್ಕೆ ಪ್ರಯಾಣಿಕರು ಪೊಲೀಸರ ವಿರುದ್ಧವೂ ತಿರುಗಿಬಿದ್ದರು. ಈ ವೇಳೆ ಬಸ್ ಸಿಬ್ಬಂದಿ ಕ್ಷಮೆ ಕೋರಬೇಕು ಎಂದು ಪ್ರಯಾಣಿಕರು ಪಟ್ಟು ಹಿಡಿದರು. ಕಡೆಗೆ ಪೊಲೀಸರು ರಾಜಿ ಸಂಧಾನ ನಡೆಸಿ ಸಿಬ್ಬಂದಿಯಿಂದ ಕ್ಷಮೆ ಕೋರಿಸುವಲ್ಲಿ ಸಲರಾದರು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net