ಗ್ರಂಥಾಲಯ ಮಕ್ಕಳ ಸ್ನೇಹಿಯಾಗಲಿ

trining program
Published on

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಪ್ರತಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಮಕ್ಕಳ ಸ್ನೇಹಿ ಗ್ರಂಥಾಲಯವಾಗಬೇಕು. ಮಕ್ಕಳ ಅಭಿರುಚಿಗೆ ಅನುಗುಣವಾದ ಪುಸ್ತಕಗಳನ್ನು ನೀಡಿ ಬಾಲ್ಯದಿಂದಲೇ ಓದಿನ ಅಭಿರುಚಿ ಬೆಳಸಬೇಕು ಎಂದು ಎಎನ್‌ಎಆರ್ ಡಿ ಜಿಲ್ಲಾ ತರಬೇತಿ ಸಂಯೋಜಕ ಬೈಲಾಂಜಿನ ಮೂರ್ತಿ ಹೇಳಿದರು.
ನಗರದ ತಾಪಂ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರಿಗೆ ಮಕ್ಕಳ ಸ್ನೇಹಿ ಗ್ರಾಮೀಣ ಗ್ರಂಥಾಲಯ ಕುರಿತು ಮೂರು ದಿನಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಗ್ರಂಥಾಲಯ ಮೇಲ್ವಿಚಾರಕರಿಗೆ ಸಮಯ ಪಾಲನೆ, ಶಿಸ್ತು ಪಾಲನೆ, ಹೊಸ ಹೊಸ ಮಕ್ಕಳ ನೋಂದಣಿ ಮಾಡಿಸುವುದು, ಮಕ್ಕಳು ಪ್ರತಿನಿತ್ಯ ಗ್ರಂಥಾಲಯಕ್ಕೆ ಬಂದು ಓದುವ ಹಾಗೆ ಪ್ರೇರೇಪಿಸಬೇಕು. ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರತಂದು ಗ್ರಂಥಾಲಯದಲ್ಲಿ ಪುಸ್ತಕ ಹಿಡಿದು ಓದುವ ವಾತಾವರಣ ಸೃಷ್ಟಿಸಬೇಕು. ಸಣ್ಣ ಕಥೆ, ಕಥೆ ಪುಸ್ತಕ, ಪರಿಸರ, ನೈರ್ಮಲ್ಯ, ಕ್ರೀಡೆ, ಮನರಂಜನಾ ಪುಸ್ತಕ, ಬಣ್ಣಬಣ್ಣದ ಚಿತ್ರಗಳಿರುವ ಪುಸ್ತಕಗಳನ್ನು ನೀಡಿ ಓದುವಂತೆ ಪ್ರೇರೇಪಿಸಬೇಕು ಎಂದು ತಿಳಿಸಿದರು.
2021ರಲ್ಲಿ ಮಕ್ಕಳಿಗೆ ’ಓದುವ ಬೆಳಕು’ ಯೋಜನೆಯಡಿ ಗ್ರಂಥಾಲಯದಲ್ಲಿ ಉಚಿತ ನೊಂದಣಿ ಮಾಡಿಸುವ ಮೂಲಕ ಗ್ರಂಥಾಲಯದತ್ತ ಹೆಜ್ಜೆ ಹಾಕುವಂತೆ ಮಾಡಲಾಯಿತು. ಸಾರ್ವಜನಿಕರನ್ನು ವಿಶ್ವಾಸ, ಸೌಜನ್ಯದಿಂದ ಗ್ರಂಥಾಲಯಕ್ಕೆ ಸೆಳೆಯಬಹುದು. ವಿಶೇಷಚೇತನರಿಗಾಗಿ ಪ್ರತಿ ಗ್ರಂಥಾಲಯಗಳಲ್ಲಿ ರ‌್ಯಾಂಪ್ ವ್ಯವಸ್ಥೆ ಮಾಡಬೇಕು. ಗ್ರಂಥಾಲಯ ಸಹಾಯದಿಂದ ಓದಿ ಉತ್ತಮ ಸ್ಥಾನ ಅಲಂಕರಿಸಿರುವ ಮಹನೀಯರ ವಿಚಾರಗಳನ್ನು ತಿಳಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net