

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ನಗರದ ಟಿಎಂಸಿ ಬ್ಯಾಂಕ್‌ನಿಂದ ಯುಪಿಐ ಸೇವೆ ಆರಂಭಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ನವೆಂಬರ್ ವೇಳೆಗೆ ಈ ಸೇವೆ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಟಿಎಂಸಿ ಅಧ್ಯಕ್ಷ ಕೆ.ಪಿ. ವಾಸುದೇವ್ ತಿಳಿಸಿದರು.
ನಗರದ ದತ್ತಾತ್ರೇಯ ಕಲ್ಯಾಣ ಮಂದಿರದಲ್ಲಿ ಟೆಕ್ಸ್‌ಟೈಲ್ ಮ್ಯಾನುಫ್ಯಾಕ್ಚರ್ಸ್ ಕೋ ಆಪರೇಟಿವ್ ಬ್ಯಾಂಕಿನ 59ನೇ ವಾರ್ಷಿಕ ಹಾಗೂ 2022-23ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯಲ್ಲಿ ಮಾತನಾಡಿದರು. ಟಿಎಂಸಿ ಬ್ಯಾಂಕ್ ಮಾರ್ಚ್ 2023ರ ಅಂತ್ಯಕ್ಕೆ 30.46 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು, ಬ್ಯಾಂಕ್ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿರುವ 7 ಅಂಶಗಳ ಅರ್ಹತೆಯನ್ನು ಬ್ಯಾಂಕ್ ಹೊಂದಿದ್ದು, ತಾಲೂಕಿನಲ್ಲಿ ಹೊಸ ಶಾಖೆ ತೆರೆಯಲು ಚಿಂತನೆ ನಡೆಸಲಾಗಿದೆ ಎಂದರು.
ಈ ವರ್ಷದ ನವೆಂಬರ್‌ಗೆ ಟಿಎಂಸಿ ಬ್ಯಾಂಕ್ 60 ವರ್ಷ ಪೂರೈಸುತ್ತಿರುವುದು ಹೆಮ್ಮೆಯ ಸಂಗತಿ. ಇದರ ಅಂಗವಾಗಿ ವಜ್ರ ಮಹೋತ್ಸವ ಆಚರಿಸಲಾಗುವುದು. ಬ್ಯಾಂಕ್ ಡಿಜಿಟಲೀಕರಣ ಮಾಡಲು ಒತ್ತು ನೀಡಿ ನವೆಂಬರ್ ವೇಳೆಗೆ ಯುಪಿಐ ಪಾವತಿ, ಮೊಬೈಲ್ ಬ್ಯಾಂಕಿಂಗ್ ಮೊದಲಾದ ಸೌಲಭ್ಯ ನೀಡಲು ಪ್ರಯತ್ನಿಸಲಾಗುವುದು ಎಂದರು.
ನೇಕಾರರಿಗೆ 5 ಲಕ್ಷದವರೆಗೆ ಸಾಲ: ಮಾರ್ಚ್ 2023ರ ಪ್ರಗತಿಯಂತೆ ಷೇರು ಮೊತ್ತ 50.98 ಲಕ್ಷ ರೂ., ಠೇವಣಿ 12.97 ಕೋಟಿ ರೂ. ದಾಟಿದೆ. 4.37 ಕೋಟಿ ರೂ. ಸಾಲ ವಸೂಲಿ ಮಾಡಲಾಗಿದೆ. ಆಡಿಟ್ ವರದಿಯಲ್ಲಿ ಎ ಶ್ರೇಣಿ ಪಡೆದಿದೆ. ಈ ಬಾರಿ ಸದಸ್ಯರ ಕೋರಿಕೆ ಮೇರೆಗೆ ಶೇ.10 ಡಿವಿಡೆಂಡ್ ನೀಡಲಾಗುತ್ತಿದೆ. ಮಗ್ಗಗಳ ಮೇಲೆ ಸಾಲ ನೀಡುವ ಏಕೈಕ ಬ್ಯಾಂಕ್ ನಮ್ಮದಾಗಿದೆ. ಮಗ್ಗದ ಮೇಲೆ ಈ ಹಿಂದೆ 3 ಲಕ್ಷ ರೂ. ಸಾಲ ನೀಡಲಾಗುತ್ತಿತ್ತು, ಈಗ ಇದನ್ನು 5 ಲಕ್ಷ ರೂ.ಗೆ ಏರಿಸಲಾಗುತ್ತಿದೆ ಎಂದು ಅಧ್ಯಕ್ಷ ವಾಸುದೇವ ತಿಳಿಸಿದರು.