

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಉದ್ಯಮಶೀಲತಾ ಪರಿಕಲ್ಪನೆಯನ್ನು ಕಾಲೇಜುಗಳಲ್ಲಿ ಪರಿಚಯಿಸಿ ಸೂಕ್ತ ಮಾರ್ಗದರ್ಶನ ನೀಡಿದರೆ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉದ್ಯಮಿಗಳಾಗಿ ಬೆಳೆಯಲು ಸಹಕಾರಿಯಾಗುತ್ತದೆ ಎಂದು ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುನಿರಾಜು ಅಭಿಪ್ರಾಯಪಟ್ಟರು.
ದೊಡ್ಡಬಳ್ಳಾಪುರ ನಗರದ ಸಾಮರ್ಥ್ಯ ಸೌಧದಲ್ಲಿ ವಿಶ್ವ ಸಂಸ್ಥೆ ಅಭಿವೃಧ್ಧಿ ಕಾರ್ಯಕ್ರಮ, ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಎಸ್‌ಎಪಿ ಲ್ಯಾಬ್-ಕೋಡ್ ಉನ್ನತಿ ಯೋಜನೆ ಮತ್ತು ಸೆವೆಂತ್‌ಸೆನ್ಸ್ ಸಂಸ್ಥೆ ಸಹಯೋಗದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕಾಲೇಜುಗಳ ಪ್ರಾಧ್ಯಾಪಕರಿಗೆ ಆಯೋಜಿಸಿದ್ದ ಉದ್ಯಮಶೀಲತೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಉದ್ಯಮಶೀಲ ಪರಿಕಲ್ಪನೆ ಮೂಡಿಸುವ ನಿಟ್ಟಿನಲ್ಲಿ ಶಿಕ್ಷಕರಿಗೆ ಮೊದಲು ತರಬೇತಿ ನೀಡುವ ಮೂಲಕ ಕಾಲೇಜುಗಳಲ್ಲಿ ಉದ್ಯಮಶೀಲತಾ ಕಾರ್ಯಕ್ರಮ ಅನುಷ್ಠಾನ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಶಿಕ್ಷಣ ನೀತಿಲ್ಲಿ ನಿರ್ದಿಷ್ಟವಾಗಿ ಎಲ್ಲವನ್ನೂ ಪಠ್ಯಕ್ರಮದ ಭಾಗವಾಗಿಸಲು ಗಮನಹರಿಸಲಾಗಿದೆ. ಆದ್ದರಿಂದ, ಪಠ್ಯಕ್ರಮದ ರಚನೆ ಮತ್ತು ವಹಿವಾಟು ಪ್ರಕ್ರಿಯೆ ಬಗ್ಗೆ ಶಿಕ್ಷಕರಲ್ಲಿ ಅರಿವಿರಬೇಕು, ಮುಖ್ಯ ಪಠ್ಯಕ್ರಮದಲ್ಲಿ ಉದ್ಯಮಶೀಲತೆ ಬಗ್ಗೆ ಶಿಕ್ಷಕರು ಆಳವಾದ ಜ್ಞಾನ ಹೊಂದಿರಬೇಕು ಎಂದರು.
ಹೊಸ ಶಿಕ್ಷಣ ನೀತಿ ಉದ್ಯಮಗಳ ಮೇಲೆ ಗಣನೀಯ ಗಮನ ನೀಡುತ್ತದೆ ಮತ್ತು ಇಂತಹ ಸಂದರ್ಭದಲ್ಲಿ ಶಿಕ್ಷಕರಿಗೆ ಈ ತರಬೇತಿ ಬಹುಮುಖ್ಯವಾಗಿದೆ ಎಂದು ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಯೋಜನೆಯ ಸಮುದಾಯ ಸಂಯೋಜಕ ಪ್ರವೀಣ್ ಕುಮಾರ್ ಹೇಳಿದರು.
ಶಿಕ್ಷಕರು ಪಠ್ಯ ವಿಷಯಗಳಲ್ಲಿ ಉದ್ಯಮಶೀಲ ಸಂಪರ್ಕದ ವಿಧಾನಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದು ಮತ್ತು ಸೂಕ್ತ ಸಲಹೆ, ಮಾರ್ಗದರ್ಶನದಲ್ಲಿ ಮೌಲ್ಯ ವೃದ್ಧಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ವಿವರಿಸಿದರು.