ವರ್ಗಾ ಆಗದಿದ್ದಕ್ಕೆ ಮನನೊಂದ ಶಿಕ್ಷಕಿ ಆತ್ಮಹತ್ಯೆ

teacher sucide
Published on

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ವರ್ಗಾವಣೆಗೆ ಅವಕಾಶ ಸಿಗದೆ ಮನನೊಂದ ಸರ್ಕಾರಿ ಶಾಲೆ ಶಿಕ್ಷಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ನಗರದ ಸೋಮೇಶ್ವರ ಬಡಾವಣೆಯಲ್ಲಿ ಶನಿವಾರ ಬೆಳಕಿಗೆ ಬಂದಿದೆ.
ತುರುವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಶಿಕ್ಷಕಿಯಾಗಿದ್ದ ಎನ್.ಟಿ.ಜ್ಯೋತಿ (33) ಮೃತೆ. ಮೂಲತಃ ಚಿತ್ರದುರ್ಗ ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ವಿರೂಪಾಕ್ಷ ಎಂಬುವರನ್ನು 13 ವರ್ಷದ ಹಿಂದೆ ವಿವಾಹವಾಗಿದ್ದು ದಂಪತಿಗೆ ಮಕ್ಕಳಿರಲಿಲ್ಲ.
12 ವರ್ಷದಿಂದ ದೊಡ್ಡಬಳ್ಳಾಪುರ ತಾಲೂಕಿನ ಬನವತಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಿಯಾಗಿದ್ದ ಜ್ಯೋತಿ 9 ತಿಂಗಳ ಹಿಂದೆ ತುರುವನಹಳ್ಳಿ ಸರ್ಕಾರಿ ಶಾಲೆಗೆ ವರ್ಗಾವಣೆಯಾಗಿದ್ದರು. ಅಂದಿನಿಂದ ನಗರದ ಸೋಮೇಶ್ವರ ಬಡಾವಣೆಯಲ್ಲಿ ಮನೆ ಮಾಡಿಕೊಂಡು ವಾಸವಿದ್ದರು. ಪ್ರಾಥಮಿಕ ಶಾಲಾ ಮಟ್ಟದಿಂದ ಪ್ರೌಢಶಾಲೆಗೆ ವರ್ಗಾವಣೆ ಮಾಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು ಎನ್ನಲಾಗಿದ್ದು ಎಲ್ಲಿಯೂ ಖಾಲಿ ಜಾಗ ಇರದ ಕಾರಣ ವರ್ಗಾವಣೆ ಆಗಿರಲಿಲ್ಲ. ಈ ವಿಚಾರದಲ್ಲಿ ಮನನೊಂದಿದ್ದರು ಎಂದು ಪತಿ ವಿರೂಪಾಕ್ಷ ಪೊಲೀಸ್ ಠಾಣೆಯ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ತಡವಾಗಿ ಬೆಳಕಿಗೆ: ಜು.14 ಶುಕ್ರವಾರ ಬೆಳಗ್ಗೆ ಪತಿ ವಿರೂಪಾಕ್ಷ ಕೆಲಸದ ನಿಮಿತ್ತ ಯಲಹಂಕದ ದೊಡ್ಡಬೆಟ್ಟಹಳ್ಳಿಗೆ ಹೋಗಿದ್ದರು. ಮನೆಯಲ್ಲಿ ಪತ್ನಿ ಒಬ್ಬರೇ ಇದ್ದರು. ರಾತ್ರಿ ಮನೆಗೆ ವಾಪಸ್ ಬಂದು ನೋಡಿದಾಗ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಬೇಜಾರಿನಲ್ಲಿ ಮಲಗಿರಬಹುದು ಎಂದು ತಿಳಿದು ಮನೆಯ ಮೇಲಿನ ಕೊಠಡಿಯಲ್ಲಿ ಮಲಗಿದ್ದೆ. ಶನಿವಾರ ಬೆಳಗ್ಗೆ 6 ಗಂಟೆಗೆ ಕೆಳಗಿಳಿದು ಬಂದು ಬಾಗಿಲು ತಟ್ಟಿದಾಗ ತೆಗೆಯಲಿಲ್ಲ. ಹೊರಗಿನಿಂದ ಬೆಡ್ ರೂಮಿನ ಕಿಟಕಿ ತೆಗೆದು ನೋಡಿದಾಗ ಸೀರೆಯಿಂದ ನೇಣು ಹಾಕಿಕೊಂಡಿದ್ದರು ಎಂದು ಪತಿ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net