

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಕೇಂದ್ರ ಸರ್ಕಾರ 2025ರ ವೇಳೆಗೆ ದೇಶವನ್ನು ಕ್ಷಯಮುಕ್ತವಾಗಿಸಲು ಪಣತೊಟ್ಟಿದ್ದು, ಈ ಗುರಿ ಸಲಗೊಳ್ಳಲು ಪ್ರತಿಯೊಬ್ಬರ ಸಹಭಾಗಿತ್ವ, ಸಹಕಾರ ಮುಖ್ಯ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ನಾಗೇಶ್ ತಿಳಿಸಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಕ್ಷಯ ರೋಗಿಗಳ ದತ್ತು ತೆಗೆದುಕೊಳ್ಳುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆರ್ಥಿಕವಾಗಿ ಸದೃಢವಾಗಿರುವವರು ಬಡ ಕ್ಷಯ ರೋಗಿಗಳನ್ನು ದತ್ತು ಪಡೆಯುವ ಅಭಿಯಾನಕ್ಕೆ ಕೈಜೋಡಿಸಬೇಕು ಎಂದ ಅವರು, ಕ್ಷಯ ಗುಣಪಡಿಸುವ ರೋಗವಾಗಿದ್ದು, ಇದಕ್ಕೆ ಯಾರು ಭಯಪಡದೆ ರೋಗ ಲಕ್ಷಣ ಕಂಡುಬಂದರೆ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದು ಗುಣಪಡಿಸಿಕೊಳ್ಳಬೇಕು ಎಂದರು.
ವೈದ್ಯ ಡಾ. ರಾಮಕೃಷ್ಣ ಮಾತನಾಡಿ, ಪ್ರತಿಯೊಬ್ಬ ಸಾರ್ವಜನಿಕರು, ಸಂಘ ಸಂಸ್ಥೆಗಳು, ಅಧಿಕಾರಿಗಳು ಮುಂದೆ ಬಂದು ತಲಾ ಒಂದೊಂದು ಕ್ಷಯರೋಗಿಗಳನ್ನು ದತ್ತು ಪಡೆದು ಕ್ಷಯಮುಕ್ತ ರಾಷ್ಟ್ರವಾಗಿಸಲು ಸಹಕಾರ ನೀಡಬೇಕು ಎಂದರು.
ದತ್ತು ಸ್ವೀಕಾರ: ದೊಡ್ಡಬಳ್ಳಾಪುರದ ಶಿವಾಂಜನೇಯ ಗಣಪತಿ ರಾಜರಾಜೇಶ್ವರಿ ಅಮ್ಮನವರ ದೇಗುಲದ ಧರ್ಮದರ್ಶಿ ರುದ್ರೇಶ್ 9 ಕ್ಷಯರೋಗಿಗಳನ್ನು ದತ್ತು ಪಡೆದು, ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಿಸಿದರು.