

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಕ್ಷಯ ರೋಗವನ್ನು ಸಂಪೂರ್ಣ ತೊಡೆದು ಹಾಕಲು ಸರ್ಕಾರ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಇದರ ಭಾಗವಾಗಿ ಜು.17ರಿಂದ ಆ.2ರವರೆಗೆ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಹಮ್ಮಿಕೊಳ್ಳಲಾಗಿದ್ದು, ಒಂದು ವಾರದಲ್ಲಿ ತಾಲೂಕಿನ 17 ಪಿಎಚ್‌ಸಿ ಹಾಗೂ ನಗರ ವ್ಯಾಪ್ತಿಯಲ್ಲಿ ಕ್ಷಯ ಪತ್ತೆಗಾಗಿ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಲಾಗುತ್ತಿದೆ. ಅಧಿಕಾರಿಗಳು, ಆರೋಗ್ಯ ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ಹೆಚ್ಚು ಜನಸಂಖ್ಯೆ ಇರುವ ಸ್ಲಂ ಪ್ರದೇಶದ, ಕಟ್ಟಡ ನಿರ್ಮಾಣ ಪ್ರದೇಶದಲ್ಲಿ ಕಾರ್ಮಿಕರು, ವಲಸೆ ಕಾರ್ಮಿಕರಿರುವ ಪ್ರದೇಶದಲ್ಲಿ ಒಟ್ಟು 55,700 ಜನರನ್ನು ಸಮೀಕ್ಷೆಯಲ್ಲಿ ತಲುಪುವ ಗುರಿ ಹೊಂದಲಾಗಿತ್ತು. ಈ ಪೈಕಿ ಕಳೆದ ಒಂದು ವಾರದಲ್ಲಿ 35,000 ಸಾವಿರ ಜನರನ್ನು ಈಗಾಗಲೇ ತಲುಪಲಾಗಿದೆ. ಅದರಲ್ಲಿ 142 ಮಂದಿಗೆ ಕ್ಷಯದ ಲಕ್ಷಣ ಪತ್ತೆಯಾಗಿದ್ದು, 105 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಇಬ್ಬರಲ್ಲಿ ಶ್ವಾಸಕೋಶದ ಕ್ಷಯ ದೃಢ ಪಟ್ಟಿದೆ. ಅವರಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಪರಮೇಶ್ವರ ತಿಳಿಸಿದ್ದಾರೆ. ಕ್ಷಯದ ರೋಗಕ್ಕೆ ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಗುಣಪಡಿಸಿಕೊಳ್ಳಬಹುದು. ಕ್ಷಯದ ಲಕ್ಷಣಗಳು ಕಂಡುಬಂದರೆ ಅವರನ್ನು ಪರೀಕ್ಷೆಗೆ ಒಳಪಡಿಸಿ, ಕ್ಷಯ ನಿರ್ಮೂಲನೆಗೆ ಸಹಕರಿಸಬೇಕು ಎಂದು ಸಾರ್ವಜನಿಕರಲ್ಲಿ ಟಿಎಚ್‌ಒ ಪರಮೇಶ್ವರ ಮನವಿ ಮಾಡಿದರು.