

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪು
ಸ್ವಾತಂತ್ರ್ಯ ಬಂದು ಅನೇಕ ವರ್ಷಗಳ ನಂತರ ಹೋರಾಟದ ಮಹನೀಯರನ್ನು ಜನರು ಮರೆಯುತ್ತಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ವಿದ್ಯಾರ್ಥಿಗಳು, ಯುವ ಜನತೆ ತಿಳಿದುಕೊಳ್ಳಬೇಕು ಎಂದು ಜಿಲ್ಲಾ ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಪ್ರಮೋದ್ ಕುಲಕರ್ಣಿ ಹೇಳಿದರು.
ನಗರದಲ್ಲಿ ಶ್ರೀವಾಣಿ ಪದವಿ ಪೂರ್ವ ಕಾಲೇಜಿನಿಂದ ಹಮ್ಮಿಕೊಂಡಿದ್ದ ರ‌್ಯಾಂಕ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸ್ವಾಗತ ಸಿಂಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ತ್ಯಾಗ ಬಲಿದಾನದ ಕುರಿತು ಮೆಲುಕು ಹಾಕಬೇಕು. ಮಕ್ಕಳು ಮನೆಯಿಂದಲೇ ಶಿಸ್ತು, ಸಿದ್ಧಾಂತ ಕಲಿಯಬೇಕು. ನಮ್ಮ ವಸ್ತ್ರ, ನಡೆ-ನುಡಿ ಉತ್ತಮವಾಗಿರಬೇಕು. ಕಲಿತ ವಿದ್ಯೆಯನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ಯೋಚನೆಗೆ ಅವಕಾಶ ನೀಡಿದರೆ ಸಂಶೋಧನೆಗೆ ದಾರಿ ಮಾಡಿಕೊಡುತ್ತದೆ ಎಂದರು.
ಚಿಕ್ಕಬಳ್ಳಾಪುರದ ಬಿಜಿಎಸ್ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಟಿ.ರಾಜು ಮಾತನಾಡಿ, ಶೈಕ್ಷಣಿಕವಾಗಿ ಯಶಸ್ಸು ಗಳಿಸಲು ವಿದ್ಯಾರ್ಥಿಗಳು ನಿರಂತರ ಪರಿಶ್ರಮ ಅಗತ್ಯ. ಸಾಧಕರಾಗಲು ಬದುಕಿನ ಯಶಸ್ವಿಗಾಗಿ ಕನಸು ಕಾಣಬೇಕು. ಪಾಲಕರು ಮಕ್ಕಳ ಬಗ್ಗೆ ನಿರ್ಲಕ್ಷ್ಯ ಮಾಡದೆ ಅವರ ಶಿಕ್ಷಣದತ್ತ ಎಚ್ಚರವಹಿಸಬೇಕು ಎಂದರು.
2022-23ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಮೊದಲನೇ ವರ್ಷದ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಕೋರಲಾಯಿತು.