

ವೆಂಕಟರಾಜು ಎಸ್. ದೊಡ್ಡಬಳ್ಳಾಪುರ
ಸ್ವ-ಉದ್ಯೊಗಕ್ಕೆ ಹೆಚ್ಚಿನ ಒತ್ತು ನೀಡಿ ಜನರನ್ನು ಸ್ವಾವಲಂಬಿಗಳನ್ನಾಗಿಸುವುದು ಸರ್ಕಾರಗಳ ಉದ್ದೇಶ. ಗ್ರಾಮಾಂತರ ಭಾಗದ ರೈತರಿಗೆ ಸ್ವಾವಲಂಬಿ ಯೋಜನೆಗೆ ಅತಿ ಹೆಚ್ಚಿನ ಬಲ ನೀಡುತ್ತಿರುವುದು ಹೈನುಗಾರಿಕೆ. ಆದರೆ ಹೈನುಗಾರಿಕೆಗೆ ಅಗತ್ಯವಾಗಿ ಬೇಕಾಗಿರುವ ಪಶು ಆಹಾರದ ಬೆಲೆ ಏರಿಕೆ, ಚರ್ಮಗಂಟು ವ್ಯಾಧಿ, ಕೆಲವೆಡೆ ಮೇವಿನ ಕೊರತೆ ರೈತರನ್ನು ಸಂಕಷ್ಟ ತಂದಿಟ್ಟಿದೆ.
ಈ ವರ್ಷ ಸೂಕ್ತ ಮಳೆಯಾಗದ ಪರಿಣಾಮ ಎಲ್ಲೆಡೆ ಮೇವಿನ ಕೊರತೆ ಎದುರಾಗಿದೆ. ಮುಖ್ಯವಾಗಿ ಹಸಿರು ಮೇವಿನ ಪ್ರಮಾಣ ಸಾಕಷ್ಟು ಕಡಿಮೆಯಾಗಿ ಹೈನುಗಾರಿಕೆ ಉದ್ಯಮದ ಮೇಲೆ ಪರಿಣಾಮ ಬೀರಿದೆ. ಇದರಿಂದ ಹಾಲು ಉತ್ಪಾದನೆಯೂ ಕುಂಠಿತವಾಗಿದೆ. ಕಳೆದ ವರ್ಷ ಜುಲೈನಲ್ಲಿ ಬಮುಲ್ ವ್ಯಾಪ್ತಿಯಲ್ಲಿ ಸರಾಸರಿ 17.75 ಲಕ್ಷ ಲೀಟರ್ ಸರಬರಾಜು ಆಗುತ್ತಿತ್ತು. ಈ ವರ್ಷದ ಜುಲೈ ಮಾಸದಲ್ಲಿ ಸುಮಾರು 15.25 ಲಕ್ಷ ಲೀಟರ್ ಹಾಲು ಸರಬರಾಜಾಗಿದ್ದು, ಸರಾಸರಿ 2 ಲಕ್ಷ ಲೀಟರ್ ಹಾಲು ಉತ್ಪಾದನೆ ಕುಂಠಿತವಾಗಿದೆ. ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಕಳೆದ ವರ್ಷ 1.40 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗಿತ್ತು. ಈ ವರ್ಷ 1.15 ಲಕ್ಷ ಲೀಟರ್ ಹಾಲು ಸಂಗ್ರವಾಗುತ್ತಿದ್ದು, 22-25 ಸಾವಿರ ಲೀಟರ್ ಕಡಿಮೆಯಾಗಿದೆ.
ಪಶು ಆಹಾರ, ಉತ್ಪಾದನಾ ವೆಚ್ಚ ಏರಿಕೆ: ಬಮುಲ್ ಒಕ್ಕೂಟವು ರೈತರಿಗೆ ಏಪ್ರಿಲ್, ಮೇ ಮಾಸದಲ್ಲಿ ಹಾಲಿನ ದರಕ್ಕೆ ಹೆಚ್ಚುವರಿಯಾಗಿ 2.85 ರೂ. ನೀಡಲು ಆರಂಭಿಸಿದ ಬೆನ್ನಲ್ಲೇ ಬೂಸಾ, ಹಿಂಡಿ, ಫೀಡು ಸೇರಿ ಪಶು ಆಹಾರಗಳು ಏರಿಕೆಯಾಗಿದ್ದವು. ಹಾಲಿಗೆ ಹೆಚ್ಚುವರಿ ಹಣ ಸಿಗುತ್ತಿದ್ದ ಕಾರಣ ಏರಿಕೆಯಾಗಿರುವ ಹೆಚ್ಚುವರಿ ಬೆಲೆ ಸರಿದೂಗಿಸಿಕೊಂಡು ಹೋಗಲಾಗುತ್ತಿತ್ತು. ಜೂನ್ ಬಳಿಕ ಹೆಚ್ಚುವರಿಯಾಗಿ ನೀಡುತ್ತಿದ್ದ 2.85 ರೂ. ಕಡಿತವಾಗಿದೆ. ಪಶುಗಳ ಆಹಾರ ದರ ಮಾತ್ರ ಯಥಾಸ್ಥಿತಿಯಲ್ಲಿದೆ. ಒಂದು ಮೂಟೆ ಬೂಸಾ 1,350 ರೂ., 30 ಕೆಜಿ ಚಕ್ಕೆ ಹಿಂಡಿ 1,600 ರೂ., ಪೀಡು 1,165 ರೂ., ಹಸಿಜೋಳದ ಒಂದು ಕಡ್ಡಿ 3 ರೂ., ಒಣ ಹುಲ್ಲು ಒಂದು ಟ್ರ್ಯಾಕ್ಟರ್ ಲೋಡು 25 ರಿಂದ 30 ಸಾವಿರ ರೂ. ಇದೆ. ಪ್ರತಿನಿತ್ಯ ರಾಸುಗಳಿಗೆ ಮೇವು ಪೂರೈಕೆ ಮಾಡುವುದು ಕಷ್ಟಕರವಾಗಿದೆ.
ಹೈನುಗಾರಿಕೆಯತ್ತ ಸುಳಿಯದ ಯುವಪೀಳಿಗೆ: ಹೈನುಗಾರಿಕೆ ಬಯಲುಸೀಮೆ ಭಾಗದ ರೈತಾಪಿ ವರ್ಗದ ಜೀವನ ಸುಧಾರಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಉದ್ಯಮ. ಬೆಲೆ ಏರಿಕೆಗಳ ಮಧ್ಯೆ ನಿರೀಕ್ಷಿತ ಲಾಭ ಇಲ್ಲದೆ ಹೈನೋದ್ಯಮದಿಂದ ರೈತರು ವಿಮುಖರಾಗುತ್ತಿದ್ದಾರೆ. ಅದರಲ್ಲೂ ಯುವ ಪೀಳಿಗೆಗೆ ಹೈನುಗಾರಿಕೆಯ ಬಗ್ಗೆ ತಿಳಿವಳಿಕೆಯೇ ಇಲ್ಲದಾಗಿದೆ. ಚರ್ಮಗಂಟು ವ್ಯಾಧಿ ರೈತರನ್ನು ಇನ್ನಿಲ್ಲದಂತೆ ಬಾಧಿಸಿದ ಬಳಿಕ ರೈತರು ಹಸುಗಳನ್ನೇ ಮಾರಾಟ ಮಾಡುತ್ತಿದ್ದಾರೆ. ಇನ್ನು ಕೈಗಾರಿಕಾ ಪ್ರದೇಶ ಅಭಿವೃದ್ಧಿ ನೆಪದಲ್ಲಿ ಗ್ರಾಮಾಂತರ ಭಾಗದಲ್ಲಿ ಸಾವಿರಾರು ಎಕರೆಗಳನ್ನು ಸರ್ಕಾರ ವಶಪಡಿಸಿಕೊಳ್ಳುತ್ತಿರುವುದರಿಂದ ಹಸುಗಳನ್ನು ಮೇಯಿಸಲು ಮೇವು ಕೂಡ ಸಿಗದಂತಾಗಿದೆ.
ಜೀವನ ನಿರ್ವಹಣೆ ಕಷ್ಟ: ಹಲವು ಕುಟುಂಬಗಳಿಗೆ ಹೈನುಗಾರಿಕೆ ಜೀವನದ ಆಧಾರ ಸ್ತಂಭವಾಗಿದೆ. ಹೈನುಗಾರಿಕೆಯನ್ನು ನಂಬಿ ಅದರಿಂದ ಬರುವ ಹಣದಲ್ಲೇ ಜೀವನ ನಿರ್ವಹಣೆ ಮಾಡುತ್ತಿರುವ ಸಾಕಷ್ಟು ಕುಟುಂಬಗಳಿವೆ. ಇತ್ತೀಚಿನ ಹಲವು ಸಂಕಷ್ಟಗಳ ಪರಿಣಾಮ ಆದಾಯದ ಮೂಲ ಕುಸಿಯುತ್ತಿರುವುದರಿಂದ ಖರ್ಚು ಸರಿದೂಗಿಸಲು ಪರದಾಡುವ ಪರಿಸ್ಥಿತಿ ಇದ್ದು, ಭವಿಷ್ಯದಲ್ಲಿ ಜೀವನ ನಿರ್ವಹಣೆ ನಡೆಸುವುದು ಹೇಗೆ ಎಂಬ ಚಿಂತೆ ಆರಂಭವಾಗಿದೆ. ಹೈನುಗಾರರಿಗೆ ಇಷ್ಟೊಂದು ಸಮಸ್ಯೆಗಳಿದ್ದರೂ ಹಾಲಿನ ದರ ಏರಿಕೆ ಮಾಡದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ದೇಶಕ್ಕೆ ರೈತರು ಮತ್ತು ಸೈನಿಕ ಕಣ್ಣುಗಳಿದ್ದಂತೆ, ಹಾಲು ಉತ್ಪಾದಕ ರೈತರಿಗೆ ಸಾಲಸೌಲಭ್ಯ, ವಿಮೆ, ಮಕ್ಕಳಿಗೆ ಶೈಕ್ಷಣಿಕ ಧನಸಹಾಯ, ಚಾಫ್ ಕಟ್ಟರ್, ಮ್ಯಾಟ್, ಕ್ಯಾನ್‌ಗಳು, ಎಂಪಿಸಿಎಸ್‌ಗಳಿಗೆ ನೂತನ ಕಟ್ಟಡಗಳು, ಕಂಪ್ಯೂಟರ್, ಪೀಠೋಪಕರಣಗಳ ಒದಗಿಸುವಿಕೆ ಸೇರಿ ರೈತರ ಪ್ರತಿಯೊಂದು ಸಮಸ್ಯೆಗೆ ಸ್ಪಂದಿಸಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ರೈತರಿಗೆ ನೀಡುವ ಹಾಲಿಗೆ 3 ರೂ.ಏರಿಕೆ ಮಾಡಿದ್ದಾರೆ. ಮುಂದೆ ಪಶು ಆಹಾರ ದರ ಇಳಿಕೆ ಬಗ್ಗೆ ಕೆಎಂಎಫ್ ತೀರ್ಮಾನ ತೆಗೆದುಕೊಳ್ಳಲಿದೆ. ರೈತರ ನೆರವಿಗೆ ಧಾವಿಸಿದ ಸಿಎಂ ಸಿದ್ದರಾಮಯ್ಯ, ಸಚಿವರಾದ ಕೆ.ಎನ್.ರಾಜಣ್ಣ, ಕೆ.ವೆಂಕಟೇಶ್ ಹಾಗೂ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಅವರಿಗೆ ರೈತರ ಪರವಾಗಿ ಧನ್ಯವಾದ.
ಬಿ.ಸಿ. ಆನಂದ್ ಕುಮಾರ್, ಕೆಎಂಎಫ್ ನಿರ್ದೇಶಕ