

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಪ್ರತಿಭಾ ಪ್ರದರ್ಶನಕ್ಕೆ ಕ್ರೀಡಾಕೂಟ ಸಹಕಾರಿಯಾಗಿದೆ. ಜತೆಗೆ ಶೈಕ್ಷಣಿಕವಾಗಿ ಬೆಳವಣಿಗೆ ಹೊಂದಲೂ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.
ನಗರದ ಭಗತ್ ಸಿಂಗ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ನಗರ ಮತ್ತು ಕಸಬಾ ಹೋಬಳಿಮಟ್ಟದ ಕ್ರೀಡಾಕೂಟದಲ್ಲಿ ಮಾತನಾಡಿದರು.
ಓದುವಂತ ಸಮಯದಲ್ಲಿ ವಿದ್ಯೆ ಮೇಲೆ ಗಮನ ಇರಬೇಕು. ಉನ್ನತ ಶಿಕ್ಷಣ ಪಡೆದರೆ ಪ್ರತಿಫಲ ಇದ್ದೆ ಇರುತ್ತದೆ ಎಂದ ಅವರು, ತಾಲೂಕಿಗೆ ಜಿಲ್ಲಾ ಕ್ರೀಡಾಂಗಣ ಮಂಜೂರಾಗಿದ್ದು, ಶೀಘ್ರವೇ ಸಿಂಥೆಟಿಕ್ ಟ್ರ್ಯಾಕ್ ಸಿದ್ಧಪಡಿಸಲು ಶ್ರಮಿಸಲಾಗುವುದು ಎಂದರು.
ಶಿಕ್ಷಣ ಇಲಾಖೆಯಿಂದ ಆಯೋಜಿಸುವ ಕ್ರೀಡಾಕೂಟಗಳಲ್ಲಿ ತೀರ್ಪುಗಾರರ ನಿರ್ಧಾರವೇ ಅಂತಿಮ. ಹೊರಗಿನ ಅಥವಾ ಯಾರೇ ಸಾರ್ವಜನಿಕರು ಮಧ್ಯೆ ಪ್ರವೇಶಿಸಿ ಕ್ರೀಡಾಕೂಟಕ್ಕೆ ಅಡ್ಡಿಪಡಿಸಿದರೆ ಅಂತಹ ಶಾಲೆಯನ್ನು ಕ್ರೀಡಾಕೂಟದಿಂದ ಮೂರು ವರ್ಷಗಳ ನಿಷೇಧ ಹೇರಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಂಗಪ್ಪ ತಿಳಿಸಿದರು.
ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಆದರೆ ಕ್ರೀಡಾಮನೋಭಾವದಿಂದ ಪಾಲ್ಗೊಂಡು ಕ್ರೀಡಾ ಸ್ಫೂರ್ತಿ ಮೆರೆಯಬೇಕು ಎಂದರು.