

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ರಾಜ್ಯ ರಾಜಧಾನಿಯ ಗಡಿ ಹಂಚಿಕೊಂಡಿರುವ ದೊಡ್ಡಬಳ್ಳಾಪುರವನ್ನು ಬೆಂಗಳೂರಿಗೆ ಪರ್ಯಾಯವಾಗಿ ಸೆಟಲೈಟ್ ಟೌನ್ ಆಗಿ ಅಭಿವೃದ್ಧಿಪಡಿಸಬೇಕು ಎಂಬ ಶಾಸಕ ಧೀರಜ್ ಮುನಿರಾಜು ಒತ್ತಾಯಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಗುವ ಸೂಚನೆ ಸಿಕ್ಕಿದೆ.
ವಿಧಾನಸಭೆಯಲ್ಲಿ ಈ ವಿಷಯದ ಬಗ್ಗೆ ಶಾಸಕ ಧೀರಜ್‌ಮುನಿರಾಜು ದನಿ ಎತ್ತಿದ್ದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ತರಲು ಸಾಧ್ಯವಿಲ್ಲ. ಬೆಂಗಳೂರಿನ ಭವಿಷ್ಯದ ಬೆಳವಣಿಗೆ ಗಮನದಲ್ಲಿರಿಸಿಕೊಂಡು ಪರ್ಯಾಯ ನಗರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ದೊಡ್ಡಬಳ್ಳಾಪುರವನ್ನ ಸೆಟಲೈಟ್ ಟೌನ್ ಆಗಿ ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಾನು ದೊಡ್ಡಬಳ್ಳಾಪುರಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದೇನೆ ಎಂದರು. ಈ ಹಿನ್ನೆಲೆಯಲ್ಲಿ ನಗರೀಕರಣದತ್ತ ಮುಂದಡಿ ಇಟ್ಟಿರುವ ದೊಡ್ಡಬಳ್ಳಾಪುರ ನಗರದ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ ಎಂಬ ಭರವಸೆ ಮೂಡಿದೆ.
ಗಮನ ಸೆಳೆದ ಒತ್ತಾಯ:
ರಾಜಧಾನಿಯ ಸಮೀಪವಿರುವ ದೊಡ್ಡಬಳ್ಳಾಪುರ ನಗರದ ಬೆಳವಣಿಗೆಗೆ ತಕ್ಕಂತೆ ಸರ್ಕಾರ ಅನುದಾನಗಳನ್ನ ನೀಡುತ್ತಿಲ್ಲ. ಸೆಟಲೈಟೌನ್ ಆಗಿ ಅಭಿವೃದ್ಧಿಪಡಿಸಿದರೆ ಅಭಿವೃದ್ಧಿಗೆ ವೇಗ ಸಿಗಲಿದೆ ಎಂದು ಧೀರಜ್ ಮನವಿ ಮಾಡಿದ್ದು ಸಭೆಯಲ್ಲಿ ಗಮನ ಸೆಳೆದಿತ್ತು. ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಜನಸಂಖ್ಯೆಇದೆ, ಸರ್ಕಾರದಿಂದ ಅನುದಾನ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ. ಮೂಲ ಸೌಕರ್ಯಗಳ ಒದಗಿಸುವಿಕೆಗೂ ಕಷ್ಟಕರವಾದ ಪರಿಸ್ಥಿತಿ ಇದೆ. ನಮ್ಮ ನಗರಸಭೆಯನ್ನು ಗ್ರೇಡ್ -1 ಆಗಿ ಮೇಲ್ದರ್ಜೆಗೆ ಏರಿಸಲು ಅರ್ಹವಾಗಿದೆ. ಸರ್ಕಾರದ ಈ ಕುರಿತು ಶೀಘ್ರವಾಗಿ ಕ್ರಮ ಜರುಗಿಸಬೇಕು ಎಂದು ಕಲಾಪದಲ್ಲಿ ಒತ್ತಾಯಿಸಿದ್ದರು.